ವಿಮಾನ ಮಿಸ್: 3 ಲಕ್ಷ ರೂ. ಪರಿಹಾರಕ್ಕೆ ಒತ್ತಾಯಿಸಿದ ನವದಂಪತಿ

Prasthutha|

ಬೆಂಗಳೂರು: ಮಹಿಳೆಯೊಬ್ಬರು ಭದ್ರತಾ ಸಿಂಬ್ಬದಿಯ ಜೊತೆ ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ನವದಂಪತಿ ತಾವು ಹೋಗಬೇಕಾದ ವಿಮಾನದಲ್ಲಿ ಸಂಚರಿಸಲು ಸಾಧ್ಯವಾಗದೇ 3 ಲಕ್ಷ ರೂಗಳ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ನ.24ರಂದು ರಾತ್ರಿ 11:50 ರ ಸಮಯದಲ್ಲಿ ಗೇಟ್ ನಂಬರ್ 4ರಲ್ಲಿ ಈ ಘಟನೆ ನಡೆದಿದೆ.

- Advertisement -


ಮುಂಬೈನ ಅಂಧೇರಿ ಪಶ್ಚಿಮದಲ್ಲಿ ನೆಲೆಸಿರುವ ನೀಕೇತ ಆಗಮ್ ಎಂಬ ಮಹಿಳೆಯು ಸರತಿಯಲ್ಲಿದ್ದ ಪ್ರಯಾಣಿಕರ ಪಟ್ಟಿಯನ್ನು ಬೈಪಾಸ್ ಮಾಡಿ ಮುಂದಕ್ಕೆ ಹೋಗಲು ಪ್ರಯತ್ನಿಸಿದಾಗ ಭದ್ರತಾ ಸಿಬ್ಬಂದಿ ಮಹಿಳೆಯನ್ನು ತಡೆದಿದ್ದಾರೆ. ಆದರೆ, ತಡೆದ ಸಿಬ್ಬಂದಿ ವಿರುದ್ಧವೇ ಮಹಿಳೆ ಕೆಟ್ಟದಾಗಿ ವರ್ತಿಸಿದ್ದು ಜಗಳದಲ್ಲಿ ಸರದಿ ಸಾಲಿನಲ್ಲಿದ್ದ ಮತ್ತಿಕೆರೆ ನಿವಾಸಿಗಳಾದ ಪ್ರಿಯಾಂಕ ರಾಚಮಲ್ಲ ಮತ್ತು ವಿಜಯಕಾಂತ್ ಭೀಮಿರೆಡ್ಡಿ ತಮ್ಮ ವಿಮಾನವನ್ನು ಏರಲು ಸಾಧ್ಯವಾಗಲಿಲ್ಲ.


ನವ ದಂಪತಿ ಪ್ರಿಯಾಂಕ ರಾಚಮಲ್ಲ ಮತ್ತು ವಿಜಯಕಾಂತ್ ಭೀಮಿರೆಡ್ಡಿ ಗೋ ಫಸ್ಟ್ ಜಿ-8 4032 ವಿಮಾನದಲ್ಲಿ ಮಾಲೆಗೆ ತೆರಳುತ್ತಿದ್ದರು. ಆದರೆ, ಮಹಿಳೆಯ ರಂಪಾಟದಿಂದ ಸೆಕ್ಯೂರಿಟಿ ಕ್ಲಿಯರೆನ್ಸ್ ಸಮಯಕ್ಕೆ ಸರಿಯಾಗಿ ಪಡೆಯಲು ಸಾಧ್ಯವಾಗದೆ ತಮ್ಮ ವಿಮಾನವನ್ನು ಮಿಸ್ ಮಾಡಿಕೊಂಡಿದ್ದರು. ಇದಕ್ಕಾಗಿ ನವದಂಪತಿ ವಿಮಾನ ಸಂಸ್ಥೆಯಿಂದ 3 ಲಕ್ಷ ರೂ.ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಇನ್ನು ಭದ್ರತಾ ಸಿಬ್ಬಂದಿ ಮಹಿಳೆ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



Join Whatsapp