►ದೇಶದ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿಯೂ ಯುವಜನತೆಗೆ ಮಹತ್ತರ ಜವಾಬ್ದಾರಿಯಿದೆ: ಸವಾದ್ ಕಲ್ಲರ್ಪೆ
ಮಂಗಳೂರು: ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ವತಿಯಿಂದ ಮಂಗಳೂರಿನ ಕಚೇರಿ ಬಳಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ರಾಜ್ಯ ಸಮಿತಿ ಸದಸ್ಯ ಫಹದ್ ಅನ್ವರ್ ಧ್ವಜಾರೋಹಣಗೈದರು.
ಸ್ವಾತಂತ್ರ್ಯ ಸಂದೇಶ ನೀಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ದೇಶವು ಬ್ರಿಟಿಷರ ಕಪಿಮುಷ್ಟಿಯಿಂದ ಸ್ವಾತಂತ್ರ್ಯಗೊಂಡು ಇಂದು ಅಮೃತಮಹೋತ್ಸವವನ್ನು ನಾವು ಆಚರಿಸುತ್ತಿದ್ದೇವೆ, ಈ ಸಂದರ್ಭದಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹೋರಾಟಗಾರರನ್ನು ನೆನೆಯುತ್ತಾ ಅವರ ಹೋರಾಟದ ಚರಿತ್ರೆಯನ್ನು ಪುನರಾವರ್ತಿಸಿ ಪ್ರಸಕ್ತ ದೇಶದ ಸರ್ವಾಧಿಕಾರದ ವಿರುದ್ಧ ಹೋರಾಟಕ್ಕೆ ಶಕ್ತಿ ತುಂಬಬಹುದಾಗಿದೆ ಎಂದರು.
ಸ್ವಾತಂತ್ರ್ಯ ಚಳುವಳಿಗಳಲ್ಲಿ ಯುವಜನತೆಯ ಪಾತ್ರ ಮಹತ್ವವಾಗಿದ್ದು ಅದರಂತೆ ಈ ದೇಶದ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿಯೂ ಯುವಜನತೆಯಲ್ಲಿ ಮಹತ್ತರ ಜವಾಬ್ದಾರಿಯಿದೆ. ಅದರಂತೆ ಮುಂದೆ ಸಾಗೋಣ ಎಂದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಸಿರಾಜ್ ಮಂಗಳೂರು, ಜಿಲ್ಲಾಧ್ಯಕ್ಷ ತಾಜುದ್ದೀನ್, ಮಂಗಳೂರು ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗ್ರಾಮಾಂತರ ಕಾರ್ಯದರ್ಶಿ ಸರ್ಫರಾಝ್ ಅಂಗರಗುಂಡಿ ಕಾರ್ಯಕ್ರಮ ನಿರೂಪಿಸಿದರು.