ಶ್ರೀನಗರ: ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಹೆದ್ದಾರಿ ಮತ್ತು ಸೇನಾ ಶಿಬಿರದ ಬಳಿ ಐದು ಕಿಲೋ ತೂಕದ ಸುಧಾರಿತ ಸ್ಫೋಟಕ ಸಾಧನ (IED) ವನ್ನು ಭದ್ರತಾ ಪಡೆಗಳು ಪತ್ತೆ ಮಾಡಿ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ ಘಟನೆ ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ರಜೌರಿ ಗುರ್ದನ್ ರಸ್ತೆಯಲ್ಲಿರುವ ಗುರ್ದನ್ ಚಾವಾ ಗ್ರಾಮದಲ್ಲಿ ಕೆಲವು ಅನುಮಾನಾಸ್ಪದ ಚಲನವಲನಗಳು ನಡೆದಿವೆ ಎಂಬ ನಂಬಲರ್ಹ ಮಾಹಿತಿಯ ಪ್ರಕಾರ ಸೇನೆ ಮತ್ತು ವಿಶೇಷ ಕಾರ್ಯಾಚರಣೆಗಳ ಗುಂಪಿನ ತಂಡಗಳು ಆ ಪ್ರದೇಶದಲ್ಲಿ ಜಂಟಿಯಾಗಿ ಸುತ್ತುವರಿದು ಶೋಧ ಕಾರ್ಯಾಚರಣೆ ಪ್ರಾರಂಭಿಸಿದವು. ಕಾರ್ಯಾಚರಣೆ ವೇಳೆ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದ್ದು, ಅದು ಐಇಡಿ ಎಂದು ತಿಳಿದುಬಂದಿದೆ. ನಂತರ ನಿಯಂತ್ರಿತ ಸ್ಫೋಟದ ಮೂಲಕ ಸುರಕ್ಷಿತ ಸ್ಥಳದಲ್ಲಿ ಐಇಡಿಯನ್ನು ನಾಶಪಡಿಸಲಾಯಿತು ಎಂದು ರಜೌರಿ ಜಿಲ್ಲಾ ಪೊಲೀಸ್ ಹೇಳಿಕೆಯಿಂದ ತಿಳಿದು ಬಂದಿದೆ.