ನವದೆಹಲಿ: ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಲು ಅವಕಾಶ ಕಲ್ಪಿಸುವ ಮುಸ್ಲಿಮರಲ್ಲಿರುವ ಬಹುಪತ್ನಿತ್ವ ಮತ್ತು ವಿಚ್ಛೇದನದ ಬಳಿಕ ಮಹಿಳೆಯು ತನ್ನ ಮಾಜಿ ಪತಿಯ ಜತೆಗೆ ಮದುವೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ‘ನಿಖಾ ಹಲಾಲ’ ಪದ್ಧತಿಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಲು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಸ್ಥಾಪಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಬಹುಪತ್ನಿತ್ವ ಮತ್ತು ‘ನಿಖಾ ಹಲಾಲ’ ಅನ್ನು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಘೋಷಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಉಪಾಧ್ಯಾಯ ಅವರು ಪಿಐಎಲ್ ಸಲ್ಲಿಸಿದ್ದರು.
ಈ ಹಿಂದೆ ರಚಿಸಿದ್ದ ಸಾಂವಿಧಾನಿಕ ಪೀಠದಲ್ಲಿ ಇದ್ದವರ ಪೈಕಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಹೇಮಂತ್ ಗುಪ್ತಾ ನಿವೃತ್ತರಾಗಿದ್ದು, ಹೊಸದಾಗಿ ಐವರು ನ್ಯಾಯಮೂರ್ತಿಗಳ ಪೀಠ ರಚಿಸುವ ಅಗತ್ಯವಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿರುವವರ ಪೈಕಿ ಒಬ್ಬರಾದ ವಕೀಲ ಅಶ್ವಿನಿ ಉಪಾಧ್ಯಾಯ ಅವರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠ ಪರಿಗಣಿಸಿ, ಈ ಹೇಳಿಕೆ ನೀಡಿದೆ.
ಕಳೆದ ವರ್ಷ ಆ.30 ರಂದು ಅರ್ಜಿಗಳ ವಿಚಾರಣೆ ನಡೆಸಿದ್ದ ಸಾಂವಿಧಾನಿಕ ಪೀಠವು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಕಕ್ಷಿದಾರರನ್ನಾಗಿ ಮಾಡಿ, ಪ್ರತಿಕ್ರಿಯೆ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿತ್ತು.