ವಾರಾಣಸಿ: ವಾರಾಣಸಿಯ ಗ್ಯಾನವಾಪಿ ಮಸೀದಿಯಲ್ಲಿ ಪ್ರಾರ್ಥನೆ ನೆರವೇರಿಸಲು ಅನುಮತಿ ನೀಡುವಂತೆ ಐವರು ಮಹಿಳೆಯರು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಉತ್ತರಿಸಲು ಸೂಚಿಸಿ ಉತ್ತರ ಪ್ರದೇಶ ಸರ್ಕಾರಕ್ಕೆ, ಮಸೀದಿ ಸಮಿತಿಗೆ ಮತ್ತು ಕಾಶಿ ವಿಶ್ವನಾಥ ದೇವಾಲಯ ಮಂಡಳಿಯ ಟ್ರಸ್ಟಿಗೆ ವಾರಾಣಸಿಯ ಸ್ಥಳೀಯ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ವರದಿ ಸಲ್ಲಿಸುವಂತೆ ಆದೇಶ ಮಾಡಿರುವ ನ್ಯಾಯಾಲಯವು ವಾರಾಣಸಿಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯಕ್ತರಿಗೆ ಮೂರು ದಿನಗಳಲ್ಲಿ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದೆ.
ಮಸೀದಿಯ ಒಳಗಿರುವ ಶೃಂಗಾರ ಗೌರಿ, ಗಣೇಶ, ಹನುಮಾನ್ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷ ದೇವರುಗಳ ದರ್ಶನ ಪಡೆಯಲು, ಪೂಜೆ ನೆರವೇರಿಸಲು ಮತ್ತು ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಕೈಗೊಳ್ಳಲು ತಾವು ಹಕ್ಕು ಹೊಂದಿರುವುದಾಗಿ ಆದೇಶಿಸುವಂತೆ ಕೋರಿ ರಾಖಿ, ಲಕ್ಷ್ಮಿ, ಸೀತಾ, ಮಂಜು ಮತ್ತು ರೇಖಾ ಎನ್ನುವ ಐವರು ಮಹಿಳೆಯರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.
ಮಸೀದಿಯ ಹಳೆಯ ಕಟ್ಟಡದಲ್ಲಿ ಗಂಗಾ, ಹನುಮಾನ್, ಗೌರಿ ಶಂಕರ, ಗಣೇಶ, ಮಹಾಕಾಳೇಶ್ವರ, ಮಹೇಶ್ವರ, ಶೃಂಗಾರ ಗೌರಿ ಸೇರಿದಂತೆ ಹಲವು ದೇವರುಗಳಿವೆ ಎಂದು ಮನವಿಯಲ್ಲಿ ವಾದಿಸಲಾಗಿದೆ.
ಫಿರ್ಯಾದುದಾರರ ಕೋರಿಕೆಗಳು ಇಂತಿವೆ:
ಮಸೀದಿಯ ಹಳೆಯ ಕಟ್ಟಡದಲ್ಲಿ ಗಂಗಾ, ಹನುಮಾನ್, ಗೌರಿ ಶಂಕರ, ಗಣೇಶ, ಮಹಾಕಾಳೇಶ್ವರ, ಮಹೇಶ್ವರ, ಶೃಂಗಾರ ಗೌರಿ ಸೇರಿದಂತೆ ಹಲವು ದೇವರುಗಳ ದರ್ಶನ ಪಡೆಯಲು, ಪೂಜೆ ಸಲ್ಲಿಸಲು ಮತ್ತು ಎಲ್ಲಾ ಸಾಂಪ್ರದಾಯಿಕ ಆಚಾರ, ಪೂಜೆ ಪುನಸ್ಕಾರ ನೆರವೇರಿಸಲು ಫಿರ್ಯಾದುದಾರರು ಹಕ್ಕು ಹೊಂದಿದ್ದಾರೆ ಎಂದು ಆದೇಶಿಸಲು ಕೋರಿಕೆ.
ಪ್ರತಿದಿನ ದರ್ಶನ ಪಡೆಯಲು, ಪೂಜೆ ನೆರವೇರಿಸಲು, ಆರತಿ ಮಾಡಲು ಹಾಗೂ ಭಕ್ತರು ಸಂಪ್ರದಾಯಬದ್ಧವಾಗಿ ಪೂಜೆ ಪುನಸ್ಕಾರ ನೆರವೇರಿಸಲು ನಿರ್ಬಂಧ ವಿಧಿಸದಂತೆ, ತೊಂದರೆ, ಸಮಸ್ಯೆ, ಮಧ್ಯಪ್ರವೇಶ ಮಾಡದಂತೆ ಪ್ರತಿವಾದಿಗಳನ್ನು ನಿರ್ಬಂಧಿಸಬೇಕು.
ಮಸೀದಿಯ ಹಳೆಯ ಕಟ್ಟಡದಲ್ಲಿ ಆದಿ ವಿಶ್ವೇಶ್ವರ ಆಸ್ಥಾನದಲ್ಲಿರುವ ಶೃಂಗಾರ ಗೌರಿ, ಗಣೇಶ, ಮಹಾಕಾಳೇಶ್ವರ, ಮಹೇಶ್ವರ, ಗಂಗಾ, ಹನುಮಾನ್, ಸೇರಿದಂತೆ ಹಲವು ಪ್ರತ್ಯಕ್ಷ ಮತ್ತು ಪರೋಕ್ಷ ವಿಗ್ರಹಗಳಿಗೆ ಹಾನಿ ಅಥವಾ ನಾಶ ಮಾಡದಂತೆ ಪ್ರತಿವಾದಿಗಳನ್ನು ನಿರ್ಬಂಧಿಸಬೇಕು.
ಹಳೆಯ ಕಟ್ಟಡದ ಒಳಗೆ ಇರುವ ಪ್ರಾಚೀನ ದೇವಾಲಯ ಎಂದು ಪ್ರಸಿದ್ಧವಾಗಿರುವ ದೇವಾಲಯದ ಒಳಗಿರುವ ಶೃಂಗಾರ ಗೌರಿ, ಗಣೇಶ, ಹನುಮಾನ್, ನಂದಜೀ ಸೇರಿದಂತೆ ಹಲವು ದೇವರುಗಳಿಗೆ ಆರತಿ, ಪೂಜೆ ನೆರವೇರಿಸಲು ಹಾಗೂ ದರ್ಶನ ಪಡೆಯಲು ಯಾವುದೇ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಭದ್ರತೆ ಕಲ್ಪಿಸಲು ನಿರ್ದೇಶಿಸಬೇಕು
ಸಂವಿಧಾನದ 25ನೇ ವಿಧಿಯಡಿ ಕಲ್ಪಿಸಲಾಗಿರುವ ಮೂಲಭೂತ ಹಕ್ಕುಗಳ ಪೈಕಿ ಒಂದಾದ ಧಾರ್ಮಿಕ ಹಕ್ಕನ್ನು ಉಲ್ಲಂಘಿಸಲಾಗುತ್ತಿದ್ದು, ಉತ್ತರ ಪ್ರದೇಶ ಸರ್ಕಾರ ಮತ್ತು ಅದರ ಅಡಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಹಿಂದೂಗಳು ತಮ್ಮ ಧಾರ್ಮಿಕ ಹಕ್ಕನ್ನು ಚಲಾಯಿಸಲು ನಿರ್ಬಂಧಿಸಲಾಗದು ಮತ್ತು ವರ್ಷದಲ್ಲಿ ಒಂದು ದಿನ ಮಾತ್ರ ಪೂಜೆ ನಡೆಸಬೇಕು ಎಂದು ಕಟ್ಟಲೆ ವಿಧಿಸಲಾಗದು ಎಂದು ಮನವಿಯಲ್ಲಿ ವಿವರಿಸಲಾಗಿದೆ.
“ವರ್ಷದಲ್ಲಿ ಒಂದು ದಿನ ಮಾತ್ರ ದರ್ಶನ ಮತ್ತು ಪೂಜೆ ಮಾಡಬೇಕು ಎಂದು ನಿರ್ಬಂಧ ವಿಧಿಸುವ ಸರ್ಕಾರದ ಕ್ರಮವು ಅನಿಯಂತ್ರಿತವಾದದ್ದು, ಸ್ವೇಚ್ಛೆಯಿಂದ ಕೂಡಿರುವಂಥದ್ದು ಮತ್ತು ಕಾನೂನುಬಾಹಿರವೂ ಹಾಗೂ ಅನೂರ್ಜಿತವೂ ಆಗಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ. ಇದಲ್ಲದೇ ಕಾಶಿ ವಿಶ್ವನಾಥ ದೇವಾಲಯವನ್ನು ಮೊಘಲ್ ದೊರೆ ಔರಂಗಜೇಬ್ ನಾಶಪಡಿಸಿದ್ದಾನೆ ಎಂದು ತಗಾದೆ ಎತ್ತಲಾಗಿದೆ.
“ಇಸ್ಲಾಮಿಕ್ ದೊರೆಯಾದ ಔರಂಗಜೇಬ್ ಕಾಶಿ ವಿಶ್ವನಾಥ ದೇವಾಲಯವನ್ನು ನಾಶಪಡಿಸಲು ಫರ್ಮಾನು ಹೊರಡಿಸಿದ್ದರು. ಈ ದೇವಾಲಯವನ್ನು 1585ರಲ್ಲಿ ನಾರಾಯಣ್ ಭಟ್ ನಿರ್ಮಾಣ ಮಾಡಿದ್ದರು. ಔರಂಗಜೇಬ್ ಫರ್ಮಾನು ಹೊರಡಿಸಿದ್ದನ್ನು ಇತಿಹಾಸಕಾರರು ಉಲ್ಲೇಖಿಸಿದ್ದಾರೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಲಾಗಿದೆ.
(ಕೃಪೆ: ಬಾರ್ ಆ್ಯಂಡ್ ಬೆಂಚ್)