ಉತ್ತರ ಕನ್ನಡ: ಇಲ್ಲಿನ ಹೊನ್ನಾವರದ ಕಾಸರಕೋಡು ಬ್ಲೂ ಫ್ಲ್ಯಾಗ್ ಬೀಚ್ ಬಳಿಯಿಂದ ಇಂದು ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಭಾರೀ ಗಾತ್ರದ ಅಲೆಯೊಂದು ಬಡಿದ ಪರಿಣಾಮ ದೋಣಿ ಮಗುಚಿ, ಓರ್ವ ಮೀನುಗಾರ ನೀರು ಪಾಲಾಗಿದ್ದಾರೆ.
ನೀರುಪಾಲಾಗಿರುವ ಮೀನುಗಾರನನ್ನು ಉದಯ ತಾಂಡೇಲ್ (30) ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ಇನ್ನೂ ಮೂವರು ಈಜಿ ದಡ ಸೇರಿದ್ದಾರೆ. ಅವರನ್ನು ವಿಜಯ್ ಕ್ರಿಸ್ತದಾಸ್, ಶಂಕರ ಮಾದೇವ್ ತಾಂಡೇಲ ಹಾಗೂ ಕಾಮೇಶ್ವರ ದೇವಯ್ಯ ಎಂದು ಗುರುತಿಸಲಾಗಿದೆ.
ಪ್ರಸ್ತುತ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆಗೆ ನಿಷೇಧ ಇರುವುದರಿಂದ, ಇವರು ನಾಡದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭ ಭಾರೀ ಗಾತ್ರದ ಅಲೆಗೆ ಸಿಲುಕಿದ ಪರಿಣಾಮ ದೋಣಿ ಮಗುಚಿದೆ ಎನ್ನಲಾಗಿದೆ. ಸ್ಥಳೀಯ ಪೊಲೀಸರು ಹಾಗೂ ಮೀನುಗಾರರು ನೀರುಪಾಲಾಗಿರುವ ಉದಯ ತಾಂಡೇಲ್ ಗಾಗಿ ಹುಡುಕಾಟದಲ್ಲಿ ನಿರತರಾಗಿದ್ದಾರೆ.