ಬೆಳೆಹಾನಿಗೆ 2 ಸಾವಿರ ರೂ.ಗಳ ಮೊದಲ ಕಂತು ಮುಂದಿನ ವಾರ ಪಾವತಿ: ಕೃಷ್ಣ ಬೈರೇಗೌಡ

Prasthutha|

ಬೆಳಗಾವಿ: ಕೇಂದ್ರದಿಂದ ಬರ ಪರಿಹಾರದ ಹಣ ಬಿಡುಗಡೆಯಾಗುತ್ತಿದ್ದಂತೆ ರೈತರಿಗೆ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಭಾಗಶಃ ಪರಿಹಾರದ ಭಾಗವಾಗಿ 2 ಸಾವಿರ ರೂ.ಗಳ ಮೊದಲ ಕಂತನ್ನು ಮುಂದಿನ ವಾರ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.

- Advertisement -

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವರ್ಷ ಬರ ಜನರಿಗೆ ಬಾಧೆಯಾಗುತ್ತಿದೆ, ಸರ್ಕಾರ ಏನೆಲ್ಲಾ ಮಾಡಬೇಕೋ ಅದನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಸಿಎಂ ಅಧ್ಯಕ್ಷತೆಯಲ್ಲಿ ರಾಜ್ಯ ವಿಪತ್ತು ಪ್ರಾಧಿಕಾರ ಮೂರು ಸಭೆ ಮಾಡಿದೆ, ಸಂಪುಟ ಉಪ ಸಮಿತಿ ಇದೆ, 10 ಸಭೆ ಬರದ ಸಲುವಾಗಿ ಮಾಡಿದ್ದೇವೆ. ದೇಶದ 12 ರಾಜ್ಯಗಳಲ್ಲಿ ಮುಂಗಾರು ಅವಧಿಯ ಬರಗಾಲ ಇದೆ, 18 ರಾಜ್ಯಗಳಲ್ಲಿ ಹಿಂಗಾರು ಅವಧಿಯಲ್ಲಿ ಬರಗಾಲ ಆವರಿಸಿದೆ. ಮುಂಗಾರು ಅವಧಿಯಲ್ಲಿ ಸೆಪ್ಟಂಬರ್ 13 ರಂದೇ ರಾಜ್ಯದಲ್ಲಿ ಬರಗಾಲ ಘೋಷಣೆ ಆಗಿತ್ತು. ಬೇರೆ ರಾಜ್ಯಗಳು ನಾವು ಘೋಷಿಸಿದ 2 ತಿಂಗಳ ನಂತರ ಘೋಷಣೆ ಮಾಡಿವೆ, ಇತರ ರಾಜ್ಯಕ್ಕೂ ಮೊದಲು ನಾವಿದ್ದೇವೆ. ಸೆಪ್ಟಂಬರ್ 22 ರಂದು ಮೊದಲ ಮನವಿಯನ್ನು ಕೇಂದ್ರಕ್ಕೆ ಮಾಡಿದ್ದೇವೆ. ಮೇವಿನ ಕೊರತೆ ಬರಬಹುದು ಎಂದು 7 ಲಕ್ಷ ಬಿತ್ತನೆ ಬೀಜದ ಕಿಟ್ ಗಳನ್ನು ಬರಪೀಡಿತ ತಾಲ್ಲೂಕುಗಳಲ್ಲಿ ರೈತರಿಗೆ ಕೊಟ್ಟಿದ್ದೇವೆ. 90 ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಅದರಲ್ಲಿ 60 ಕಡೆ ಖಾಸಗಿ ಬೋರ್ವೆಲ್ ಬಾಡಿಗೆ ಪಡೆದಿದ್ದು, 25 ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಚಿತ್ರದುರ್ಗ ಸೇರಿ ಕೆಲವಡೆ ಹೆಚ್ಚಿನ ಸಮಸ್ಯೆ ಇದೆ, ಅಲ್ಲಿ ಗೋಶಾಲೆ ಆರಂಭಕ್ಕೆ ಸೂಚಿಸಲಾಗಿದೆ. ಜಿಲ್ಲಾಡಳಿತಗಳ ಬಳಿ 894 ಕೋಟಿ ಹಣವನ್ನು ಸಿದ್ಧವಿಟ್ಟಿದ್ದೇವೆ, ಕುಡಿಯುವ ನೀರಿನ ಸಮಸ್ಯೆ ಆದ 24 ಗಂಟೆಯ ಒಳಗೆ ಟ್ಯಾಂಕರ್ ಮೂಲಕವಾದರೂ ಪೂರೈಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದೇವೆ ಎಂದು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.

Join Whatsapp