ಶಿವಮೊಗ್ಗ : ಕುವೆಂಪು ವಿಮಾನ ನಿಲ್ದಾಣಕ್ಕೆ ಗುರುವಾರ ಪ್ರಥಮ ಬಾರಿಗೆ ನಾಗರಿಕ ವಿಮಾನ ಬಂದಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಾಂಪ್ರದಾಯಿಕವಾಗಿ ವಾಟರ್ ಸೆಲ್ಯೂಟ್ ನೀಡಿ ವಿಮಾನವನ್ನು ಸ್ವಾಗತಿಸಲಾಯಿತು.
ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನ 6E 77312 ವಿಮಾನ ಹೊರಟು ಕುವೆಂಪು ವಿಮಾನ ನಿಲ್ದಾಣಕ್ಕೆ ಬೆ. 10:40 ಕ್ಕೆ ಆಗಮಿಸಿತು. ಶಿವಮೊಗ್ಗಕ್ಕೆ ಬಂದ ವಿಮಾನದಲ್ಲಿ ಸುಮಾರು 70 ಜನರನ್ನು ಕರೆ ತರಲಾಯಿತು. ವಿಮಾನದಿಂದ ಎಲ್ಲಾ ಪ್ರಯಾಣಿಕರನ್ನು ಇಂಡಿಗೋ ಬಸ್ನಲ್ಲಿ ಟರ್ಮಿನಲ್ ತನಕ ಕರೆ ತರಲಾಯಿತು. ಟರ್ಮಿನಲ್ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ವಿಮಾನ ನಿಲ್ದಾಣದ ನಿರ್ದೇಶಕರು ಸೇರಿದಂತೆ ಸಿಬ್ಬಂದಿಗಳು ಪ್ರಯಾಣಿಕರಿಗೆ ಹೂಗೂಚ್ಛ ನೀಡಿ ಸ್ವಾಗತ ಕೋರಿದರು.