ಬೆಂಗಳೂರು: ಕಾಂಗ್ರೆಸ್ ನೇತೃತ್ವದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ನಡೆದ ಪಾದಯಾತ್ರೆ ಕಾರ್ಯಕ್ರಮ ಮೊದಲ ದಿನ ಬಿಡದಿಯಲ್ಲಿ ಅಂತ್ಯಗೊಂಡಿದೆ.
ಬಿಡದಿಯಲ್ಲಿ ಮೊದಲ ದಿನದ ಪಾದಯಾತ್ರೆ ಕೊನೆಯಾಗುವ ಮೊದಲು ಸೇರಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ‘ಅನೇಕ ಕಡೆಗಳಲ್ಲಿ ಮರಗಳಿಲ್ಲದೆ ಉರಿ ಬಿಸಿಲಿನಲ್ಲೇ ನಾವು ಇಂದು ಹೆಜ್ಜೆ ಹಾಕಿದ್ದೇವೆ. ಇಲ್ಲಿರುವ ಜನರಲ್ಲಿ ಕೇವಲ ಕಾಂಗ್ರೆಸಿಗರು ಮಾತ್ರ ಇಲ್ಲ, ಎಲ್ಲ ಪಕ್ಷದವರೂ ಇದ್ದಾರೆ. ಇದು ಪಕ್ಷಾತೀತ ಹೋರಾಟ. ಎಲ್ಲ ವರ್ಗದ ಜನರ ಹೋರಾಟ. ಕಾಂಗ್ರೆಸ್ ಕೇವಲ ಮುಂದಾಳತ್ವ ವಹಿಸಿಕೊಂಡಿದೆ. ಇಂದಿನ ಹೋರಾಟ ನೀರಿಗಾಗಿ. ನೀರು ಬಿಟ್ಟು ಬದುಕಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ನಾವಿಂದು ಹೋರಾಡುತ್ತಿದ್ದೇವೆ. ನಮ್ಮ ನೀರು, ನಮ್ಮ ಹಕ್ಕು. ಆದ್ದರಿಂದನೀರಿಗಾಗಿ ನಡೆಯುತ್ತಿದ್ದೇವೆ. ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ. ರಾಜಕಾರಣ ಇಂದು ಇರುತ್ತದೆ, ನಾಳೆ ಹೋಗುತ್ತದೆ. ನಾವು ಬದುಕಿರುವಾಗ ಒಂದು ಹೋರಾಟದಲ್ಲಿ ಭಾಗವಹಿಸಿ. ನಮ್ಮ ಜೀವನ ಸಾರ್ಥಕತೆ ಮಾಡಿಕೊಳ್ಳಬೇಕು. ನೀವೆಲ್ಲ ಹೋರಾಟದಲ್ಲಿ ಭಾಗವಹಿಸಿ ಇತಿಹಾಸ ಪುಟ ಸೇರಿದ್ದೀರಿ’ ಎಂದು ಹೇಳಿದರು.
ಹೋರಾಟದ ವೇಳೆ ನೀರು, ಮಜ್ಜಿಗೆ, ಎಳನೀರು ಕೊಟ್ಟು ಉಪಚರಿಸಿದವರನ್ನು ನೆನಪಿಸುತ್ತಾ ‘ಅವರಿಗೆ ನನ್ನ ಸಾಷ್ಟಾಂಗ ನಮನಗಳು’ ಎಂದು ಕೃತಜ್ಞತೆ ಸಲ್ಲಿಸಿದರು.