ಬೆಂಗಳೂರು: ಉಳ್ಳಾಲದಲ್ಲಿ ಅಗ್ನಿಶಾಮಕ ದಳ ಘಟಕವನ್ನು ಸ್ಥಾಪಿಸಬೇಕು ಎಂದು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಉಳ್ಳಾಲ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಇಲ್ಲಿ ನಾಲ್ಕು ಮೆಡಿಕಲ್ ಕಾಲೇಜು, ಮೂರು ಇಂಜಿನಿಯರ್ ಕಾಲೇಜು, ಮಂಗಳೂರು ವಿವಿ, ಎರಡು ಕೈಗಾರಿಕಾ ಪ್ರದೇಶಗಳಿವೆ. ಮಾತ್ರವಲ್ಲ ಕೇರಳ ಸಂಪರ್ಕ ರಸ್ತೆ ಕೂಡ ಇಲ್ಲಿದೆ. ಆದರೆ ಇಲ್ಲಿ ಯಾವುದಾದರೂ ಬೆಂಕಿ ಅನಾಹುತವಾದರೆ ಅಗ್ನಿಶಾಮಕ ದಳದವರು ಮಂಗಳೂರಿನಿಂದ ಬರಬೇಕಾದರೆ 1 ಗಂಟೆ ಹಾಗೂ ಬಂಟ್ವಾಳದಿಂದ ಬರಬೇಕಾದರೆ 45 ನಿಮಿಷ ಬೇಕು. ಆದ್ದರಿಂದ ಉಳ್ಳಾದಲ್ಲಿ ಅಗ್ನಿಶಾಮಕ ಘಟಕ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಕೆಐಎಡಿಬಿಯಲ್ಲಿ ಸಿಎಸ್ ಆರ್ ನಿಧಿಯಿಂದ ಕಟ್ಟಡ ನಿರ್ಮಿಸಿಕೊಡಲು ಕಂಪನಿಗಳು ಸಿದ್ಧವಿದೆ. ಅದಕ್ಕೆ ಬೇಕಾದ ಸಿಬ್ಬಂದಿಯನ್ನು ಸರ್ಕಾರ ನೇಮಿಸಲು ಮುಂದಾಗಬೇಕು. ಆರ್ಥಿಕ ಇಲಾಖೆ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಮಂಗಳೂರು ನಗರಕ್ಕೆ ಹೊಂದಿಕೊಡಂತೆ ಇರುವ ಉಳ್ಳಾಲ ಪಟ್ಟಣಕ್ಕೆ, ಆದ್ಯತೆಯ ಮೇರೆಗೆ ಅಗ್ನಿ ಶಾಮಕ ಸಿಬ್ಬಂದಿ ಗಳನ್ನು ನೇಮಕ ಮಾಡಿ, ಅಗ್ನಿ ಶಾಮಕ ಠಾಣೆಯನ್ನ್ನು ಪ್ರಾರಂಭ ಮಾಡುವುದಾಗಿ ತಿಳಿಸಿದರು
K-SAFE 2 ಯೋಜನೆ ಅಡಿಯಲ್ಲಿ, ಈಗಾಗಲೇ ಅಗ್ನಿಶಾಮಕ ಠಾಣೆ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ, ಮುಗಿಯುವವರೆಗೂ ಕಾಯದೆ, ತಕ್ಷಣ ಸಿಬ್ಬಂದಿಗಳ ನೇಮಕಗೊಳಿಸಿ ಠಾಣೆಯನ್ನು ಕಾರ್ಯಾಚರಣೆ ಗೊಳಿಸಲಾಗುವುದು ಎಂದು ತಿಳಿಸಿದರು.