ಕೊಪ್ಪಳ: ಶಾರ್ಟ್ ಸರ್ಕ್ಯೂಟ್’ನಿಂದ ಮನೆಗೆ ಬೆಂಕಿ ಹೊತ್ತುಕೊಂಡು ದಂಪತಿ ಸಜೀವ ದಹನವಾಗಿರುವ ದಾರುಣ ಘಟನೆ ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ನಡೆದಿದೆ.
ಸೈದಾಪುರ ಪಟ್ಟಣದ ರಾಗಯ್ಯ(39), ಮತ್ತವರ ಪತ್ನಿ ಶಿಲ್ಪಾ(35) ಮೃತಪಟ್ಟವರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದ ಮನೆಯಲ್ಲಿ ಬೆಂಕಿ ಹೊತ್ತುಕೊಂಡು ದುರಂತ ಸಂಭವಿಸಿದೆ ಎನ್ನಲಾಗಿದೆ.
ಅಶೋಕಯ್ಯ ಕಾಳಬೆಳಗುಂದಿ ಎಂಬುವರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ಅಜ್ಜ ಹಾಗೂ ಅಜ್ಜಿಯೊಂದಿಗೆ ಮನೆಯ ಕೆಳಮಹಡಿಯಲ್ಲಿ ಮಲಗಿದ್ದರು. ಇದರಿಂದಾಗಿ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸೈದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.