ಸೂರತ್: ಗುಜರಾತ್ ನ ಸೂರತ್ ನಗರದಲ್ಲಿರುವ ರಾಸಾಯನಿಕ ಘಟಕದಲ್ಲಿ ಬುಧವಾರ ಸ್ಫೋಟ ಸಂಭವಿಸಿದ್ದು, 24 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚಿನ್ ಜಿಐಡಿಸಿ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿ ಶೇಖರಿಸಲಾಗಿದ್ದ ದಹಿಸುವ ರಾಸಾಯನಿಕಗಳ ಸೋರಿಕೆಯಿಂದಾಗಿ ದೊಡ್ಡ ಟ್ಯಾಂಕ್ ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಸೂರತ್ ಉಸ್ತುವಾರಿ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪರೀಕ್ ಹೇಳಿದ್ದಾರೆ.
“ಘಟನೆಯಲ್ಲಿ ಕನಿಷ್ಠ 24 ಕಾರ್ಮಿಕರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.