ಫಾರ್ಮಾ ಲ್ಯಾಬ್ ಕಂಪನಿಯಲ್ಲಿ ಅಗ್ನಿ ದುರಂತ: ನಾಲ್ವರು ಸಜೀವ ದಹನ

Prasthutha|

ವಿಶಾಖಪಟ್ಟಣಂ: ಫಾರ್ಮಾ ಕಂಪನಿಯ ಪ್ರಯೋಗಾಲಯದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಒಬ್ಬ ವ್ಯಕ್ತಿಗೆ ತೀವ್ರ ಸುಟ್ಟ ಗಾಯಗಳಾದ ಘಟನೆ ಆಂಧ್ರಪ್ರದೇಶದ ಅನಕಪಲ್ಲೆಯ ಪರವಾಡದಲ್ಲಿ ಸೋಮವಾರ ರಾತ್ರಿ ನಡೆದಿದೆ.

- Advertisement -


ಮೃತರನ್ನು ಟಿ ರಾಜೇಶ್ ಬಾಬು, ಆರ್ ರಾಮ್ ಕೃಷ್ಣ, ಬಿ ರಾಮಬಾಬು, ಎಂ ವೆಂಕಟ ರಾವ್ ಹಾಗೂ ಗಾಯಗೊಂಡ ವ್ಯಕ್ತಿಯನ್ನು ವೈ ಸತೀಶ್ ಎಂದು ಗುರುತಿಸಲಾಗಿದೆ.


ಜೆಎನ್ ಫಾರ್ಮಾ ಸಿಟಿಯ ಲಾರಸ್ ಲ್ಯಾಬ್ಸ್ ಲಿಮಿಟೆಡ್ ನ ಮೂರನೇ ಘಟಕದಲ್ಲಿ ಈ ಘಟನೆ ನಡೆದಿದ್ದು, ಕಾರ್ಮಿಕರು ಘಟಕವನ್ನು ಸ್ವಚ್ಛಗೊಳಿಸುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ಕಾರ್ಮಿಕ ಸಂಘಟನೆಗಳ ನಾಯಕರು ತಿಳಿಸಿದ್ದಾರೆ.

- Advertisement -


ಟೊಲುಯೆನ್ ದ್ರಾವಕದ ಸೋರಿಕೆಯ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ ಎಂದು ಕಾರ್ಖಾನೆಗಳ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಮಿಕರು ಟೊಲುಯೆನ್ ಸೋರಿಕೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾಗ, ರಾಸಾಯನಿಕವು ಬೆಂಕಿಗೆ ಆಹುತಿಯಾಗಿದೆ.


ಲಾರಸ್ ಪ್ರಯೋಗಾಲಯದಲ್ಲಿ ಸಂಭವಿಸಿದ ಅಗ್ನಿ ದುರಂತವನ್ನು ದೃಢಪಡಿಸಿರುವ ಅನಕಪಲ್ಲೆ ಪೊಲೀಸ್ ಮುಖ್ಯಸ್ಥ ಗೌತಮಿ ಸಾಲಿ, ಅವರು ಘಟನೆಯಲ್ಲಿ ಸಂಭವಿಸಿದ ಸಾವುನೋವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.


ರಾಜ್ಯ ಕೈಗಾರಿಕಾ ಸಚಿವ ಅಮರನಾಥ್ ಈ ಬಗ್ಗೆ ಮಾತಾನಾಡಿ, ಘಟನೆಯಲ್ಲಿ ಗಂಭೀರ ಗಾಯಗೊಂಡ ಕಾರ್ಮಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅವಘಡದ ಬಗ್ಗೆ ಸಿಎಂ ಜಗನ್‌ ಅವರಿಗೆ ಮಾಹಿತಿ ನೀಡಿದ್ದೇನೆ. ಸಿಎಂ ಮೃತ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರವವನ್ನು ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.



Join Whatsapp