ಲಕ್ನೋ: ರಾಮಾಯಣ ರಚನೆಗಾರ ವಾಲ್ಮೀಕಿಯನ್ನು ತಾಲಿಬಾನ್ ಬಂಡುಕೋರರ ಜೊತೆ ಹೋಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಕವಿ ಮುನವ್ವರ್ ರಾಣಾ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿದ ಆರೋಪದಡಿಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆಯೆಂದು ಯುಪಿ ಪೊಲೀಸರು ತಿಳಿಸಿದ್ದಾರೆ.
ವಾಲ್ಮೀಕಿಯನ್ನು ತಾಲಿಬಾನ್ ಗೆ ಹೋಲಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆವುಂಟು ಮಾಡಿರುವ ಆರೋಪದಲ್ಲಿ ಪಿ.ಎಲ್. ಭಾರತಿ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಾಣಾ ವಿರುದ್ಧ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 ಎ, 295 ಎ, 505 ಬಿ ಮತ್ತು ಎಸ್ ಸಿ/ಎಸ್.ಟಿ ದೌರ್ಜ್ಯನ್ಯ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಾಲ್ಮೀಕಿಯನ್ನು ತಾಲಿಬಾನ್ ನೊಂದಿಗೆ ಹೋಲಿಸುವ ಮೂಲಕ ದಲಿತರ ಮತ್ತು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆಂದು ಭಾರತಿ ಅವರು ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಚಾನೆಲೊಂದರ ಸಂದರ್ಶನದಲ್ಲಿ ಮಾತನಾಡಿದ ರಾಣಾ ಅವರು, ರಾಮಾಯಣ ರಚಿಸಿದ ವಾಲ್ಮೀಕಿ ದೇವರಾದರು. ಅದಕ್ಕೂ ಮೊದಲು ಅವರು ದರೋಡೆಕೋರರಾಗಿದ್ದರು. ಅಂತೆಯೇ ತಾಲಿಬಾನ್ ಬಂಡುಕೋರರು ಈಗ ಭಯೋತ್ಪಾದಕರಾಗಿದ್ದಾರೆ. ಜನರು ಮತ್ತು ಪಾತ್ರಗಳು ಬದಲಾಗುತ್ತವೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಮಾತ್ರವಲ್ಲದೆ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಕ್ಕಾಗಿ ಫ್ರಾನ್ಸ್ ನಲ್ಲಿ ನಡೆದ ಹತ್ಯೆಗಳನ್ನು ಸಮರ್ಥಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ನವೆಂಬರ್ ನಲ್ಲಿ ರಾಣಾ ವಿರುದ್ಧ ಹಜರತ್ ಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.