ಖ್ಯಾತ ಅಂಕಣಗಾರ ರಾಮ್ ಪುನಿಯಾನಿಗೆ ಜೀವ ಬೆದರಿಕೆ: ಎಫ್ ಐಆರ್ ದಾಖಲು

Prasthutha|

ನವದೆಹಲಿ: ಖ್ಯಾತ ಸಾಮಾಜಿಕ ಕಾರ್ಯಕರ್ತ, ಅಂಕಣಕಾರ ರಾಮ್ ಪುನಿಯಾನಿ ಅವರಿಗೆ ಅನಾಮಧೇಯ ವ್ಯಕ್ತಿಗಳಿಂದ ಜೀವ ಬೆದರಿಕೆ ಕರೆಗಳು ಬಂದಿವೆ. ಪ್ರಕರಣದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

- Advertisement -

ಐಐಟಿ-ಬಾಂಬೆಯಲ್ಲಿ ಮಾಜಿ ಪ್ರೊಫೆಸರ್ ಆಗಿರುವ ರಾಮ್ ಪುನಿಯಾನಿ ಅವರು ಪ್ರಸಿದ್ಧ ವಿಚಾರವಾದಿಯಾಗಿದ್ದು, ಕೋಮು ಸೌಹಾರ್ದತೆಯನ್ನು ಪ್ರಚುರಪಡಿಸಲು ದೇಶಾದ್ಯಂತ ಕಾರ್ಯಾಗಾರಗಳು ಮತ್ತು ಉಪನ್ಯಾಸಗಳನ್ನು ನೀಡುತ್ತಿದ್ದಾರೆ.

ಪುನಿಯಾನಿಗೆ ಬೆದರಿಕೆ ಬರುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮೊದಲು ಮಾರ್ಚ್ ನಲ್ಲಿ ಮೊದಲನೇ ಬಾರಿಗೆ ಬೆದರಿಕೆ ಕರೆ ಬಂದಿದ್ದವು. ಇದೀಗ ಮತ್ತೊಮ್ಮೆ ಲ್ಯಾಂಡ್ ಲೈನ್ ದೂರವಾಣಿ ಮೂಲಕ ಜೀವ ಬೆದರಿಕೆ ಬಂದಿದೆ ಎಂದು ತಿಳಿದುಬಂದಿದೆ.

- Advertisement -

ಪುನಿಯಾನಿ  ಹಿಂದೂ ವಿರೋಧಿ ಎಂದು ಕರೆದಿರುವ ದುಷ್ಕರ್ಮಿ,  ಅವರು ತನ್ನ ಚಟುವಟಿಕೆಗಳನ್ನು ನಿಲ್ಲಿಸಬೇಕು ಅಥವಾ ಪರಿಣಾಮಗಳನ್ನು ಎದುರಿಸಬೇಕು ಎಂದು ಬೆದರಿಕೆ ಹಾಕಿದ್ದಾನೆ. ಜೊತೆಗೆ ಕರೆ ಮಾಡಿದ ದುಷ್ಕರ್ಮಿ, ಪುನಿಯಾನಿ  ಇನ್ನು 15 ದಿನಗಳಲ್ಲಿ ಮುಂಬೈಯನ್ನು ತೊರೆಯಬೇಕು ಎಂದು ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪುನಿಯಾನಿ, ಇದು ಅತ್ಯಂತ ಕಳವಳಕಾರಿ ವಿಷಯ. ನನ್ನ ಕುಟುಂಬದವರು ನನ್ನ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ಈ ರೀತಿಯ ಬೆದರಿಕೆಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದ್ದಾರೆ.

ಗೋವಿಂದ್ ಪನ್ಸಾರೆ, ನರೇಂದ್ರ ದಾಭೋಲ್ಕರ್, ಗೌರಿ ಲಂಕೇಶ್ ಮತ್ತು ಎಂ.ಎಂ.ಕಲ್ಬುರ್ಗಿ ಅವರಂತಹ  ವಿಚಾರವಾದಿಗಳನ್ನು ಬಲಪಂಥೀಯ ಹಂತಕರು ಹತ್ಯೆ ಮಾಡಿರುವುದರಿಂದ ಈ ಬೆದರಿಕೆಯು ಹೆಚ್ಚು ಗಂಭೀರವಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿವೆ

Join Whatsapp