ನವದೆಹಲಿ : ಕ್ರಿಕೆಟರ್ ಯುವರಾಜ್ ಸಿಂಗ್ ಕಳೆದ ವರ್ಷ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬಗ್ಗೆ ಮಾಡಿದ್ದ ಕಾಮೆಂಟ್ ಒಂದು, ಇದೀಗ ಜಾತಿ ನಿಂದನೆ ಆರೋಪದ ಸ್ವರೂಪವನ್ನು ಪಡೆದಿದೆ. ಈ ಸಂಬಂಧ ಹರ್ಯಾಣ ಪೊಲೀಸರು ಯುವರಾಜ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ್ಯಾಯವಾದಿ ರಜತ್ ಕಲ್ಸಾನ್ ಎಂಬವರು ಮಾಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷ ರೋಹಿತ್ ಶರ್ಮಾ ಜೊತೆಗೆ ನಡೆಸಿದ ಇನ್ಸ್ಟಾಗ್ರಾಂ ಸಂವಾದದಲ್ಲಿ ಚಾಹಲ್ ಹಾಕುವ ಪೋಸ್ಟ್ ಗಳ ಬಗ್ಗೆ ಮಾತನಾಡುತ್ತಾ, ಯುವರಾಜ್ ಜಾತಿಯೊಂದರ ಹೆಸರನ್ನು ಉಲ್ಲೇಖಿಸಿ ಮಾತುಗಳನ್ನಾಡಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ, ಅವರು ಈ ಬಗ್ಗೆ ಕ್ಷಮೆ ಕೋರಿದ್ದರು. ಆದರೆ, ಈಗ ಕಲ್ಸಾನ್ ಅವರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ಸಂವಾದದ ವೀಡಿಯೊ ನೋಡಿದ್ದಾರೆ. ಯುವರಾಜ್ ಸಿಂಗ್ ಹೇಳಿಕೆಯಿಂದಾಗಿ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕಲ್ಸಾನ್ ದೂರು ಸಲ್ಲಿಸಿದ್ದಾರೆ.