ಶನಿವಾರಸಂತೆ: ಇಬ್ಬರು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ವಾಣಿಜ್ಯ ಕಟ್ಟಡವೊಂದಕ್ಕೆ ಎಳೆದೊಯ್ದು ರಕ್ತಬರುವಂತೆ ಗುಂಪು ಹಲ್ಲೆ ನಡೆಸಿ ದೌರ್ಜನ್ಯವೆಸಗಿರುವ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸಂಘಪರಿವಾರದ ಕಾರ್ಯಕರ್ತರಾದ ಮದನ್, ತನ್ಮಯ್ ಹಾಗೂ ಇತರ 40 ಮಂದಿಯ ವಿರುದ್ಧ ಪೋಕ್ಸೋ ಹಾಗೂ ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಇಬ್ಬರು ಮುಸ್ಲಿಮ್ ವಿದ್ಯಾರ್ಥಿನಿಯರು ಶನಿವಾರಸಂತೆಯ ಖಾಸಗಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದು, ಸದ್ಯ ಕೊಡ್ಲಿಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ 354, 323, 509, 149, ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇಬ್ಬರು ಮುಸ್ಲಿಮ್ ವಿದ್ಯಾರ್ಥಿನಿಯರು ಗುರುವಾರ ತರಗತಿ ಮುಗಿಸಿ ಬಸ್ಸ್ ಗಾಗಿ ಶನಿವಾರಸಂತೆ ಕೆ.ಆರ್.ಸಿ.ವೃತ್ತದ ಬಳಿ ನಿಂತಿದ್ದಾಗ ಸಂಘಪರಿವಾರದ ಕಾರ್ಯಕರ್ತರು ಇವರಿಬ್ಬರನ್ನು ಸಮೀಪದ ಕಾಂಪ್ಲೆಕ್ಸ್ ಒಂದಕ್ಕೆ ಎಳೆದೊಯ್ದು ಅವರು ಧರಿಸಿದ ಬುರ್ಖಾವನ್ನು ಹರಿದು ಹಾಕಿ ವಿದ್ಯಾರ್ಥಿನಿಯರ ಕೆನ್ನೆಗೆ ಹಾಗೂ ಭುಜಕ್ಕೆ ಹೊಡೆದು ಎಳೆದಾಡಿದ್ದರು. ಪರಿಣಾಮ ಮಕ್ಕಳಿಗೆ ತರಚಿದ ಗಾಯಗಳಾಗಿದ್ದವು. ಈ ಬಗ್ಗೆ ವಿದ್ಯಾರ್ಥಿನಿಯರು ನೀಡಿದ ದೂರಿನಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.