ನವದೆಹಲಿ: ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಪದಬಳಕೆ ಮತ್ತು ನಾಥುರಾಮ್ ಗೋಡ್ಸೆಯನ್ನು ಹೊಗಳಿದ ಅರೋಪದಲ್ಲಿ ಸಂಘಪರಿವಾರದ ಮುಖಂಡ ಕಾಳಿಚರಣ್ ಮಹಾರಾಜ್ ವಿರುದ್ಧ ಛತ್ತೀಸ್ ಗಢ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.
ಡಿಸೆಂಬರ್ 26 ರಂದು ರಾಯ್ ಪುರದ ರಾವಣ ಭಟ ಮೈದಾನದಲ್ಲಿ ಎರಡು ದಿನಗಳ ‘ಧರ್ಮ ಸಂಸದ್ ’ ಸಮಾರೋಪದಲ್ಲಿ ಕಾಳಿಚರಣ್ ಎಂಬಾತ ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಪದಬಳಕೆ ಬಳಸಿದ್ದ ಮತ್ತು ಹಿಂದೂ ರಕ್ಷಣೆಗಾಗಿ ಕಟ್ಟರ್ ಹಿಂದೂ ನಾಯಕನನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದ್ದನು.
ಈ ಮಧ್ಯೆ ಕಾಳಿಚರಣ್ ವಿವಾದಾತ್ಮಕ ಹೇಳಿಕೆಗೆ ಆಡಳಿತರೂಢ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದರು.
ಕಾಂಗ್ರೆಸ್ ಮುಖಂಡ ಪ್ರಮೋದಿ ದುಬೆ ಅವರು ನೀಡಿದ ದೂರಿನನ್ವಯ ಕಾಳಿಚರಣ್ ವಿರುದ್ಧ ಐಪಿಸಿ ಸೆಕ್ಷನ್ 505 (2), 294 ರ ಅಡಿಯಲ್ಲಿ ತಿಕ್ರಪಾರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.