ಚಂಡೀಗಡ: ಟ್ರಾಫಿಕ್ ನಲ್ಲಿ ಬೆಲ್ಲ ಮತ್ತು ಅಕ್ಕಿಯಲ್ಲಿ ಮಾಡಿದ ಮುರುಂಡ ಎಂಬ ಸಿಹಿ ಮಾರುವ ಹುಡುಗನಿಂದ ಹಿಡಿದು ಎಲ್ಲ ಪಂಜಾಬ್ ಯುವಕರ ಕನಸು ಒಂದೇ. ಎಲ್ಲರಿಗೂ ಭಾರತ ಸಾಕಾಗಿದೆ. ಪಂಜಾಬಿಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವ ಕೆನಡಾ ದೇಶದಲ್ಲಿ ಬದುಕು ಕಟ್ಟಿಕೊಳ್ಳುವ ಬಯಕೆ ಅವರದು.
ಚುನಾವಣೆ ಬಗ್ಗೆ ಹೆಚ್ಚಿನ ಯುವಕರ ಪ್ರತಿಕ್ರಿಯೆ ನೀರಸ. ಆದರೆ ಮತ ಚಲಾಯಿಸುತ್ತೇವೆ. ಕೆನಡಾಕ್ಕೆ ಹೋಗಲು ಏನಾದರೂ ದಾರಿಯಿದ್ದರೆ ಹೇಳಿ ಎನ್ನುವವರೇ ಹೆಚ್ಚು.
ಐಇಎಲ್ ಟಿಎಸ್ ಮತ್ತು ಪಿಟಿಇ ಪರೀಕ್ಷೆಗಳ ಬಗ್ಗೆ ಪಂಜಾಬಿನ ರಸ್ತೆಗಳುದ್ದಕ್ಕೂ ಹೋರ್ಡಿಂಗ್ ಗಳನ್ನು ನೋಡಬಹುದು. ಇವರೆಲ್ಲರ ಹೇಳಿಕೆ ಒಂದೇ, ನಿಮ್ಮನ್ನು ಸರಳವಾಗಿ ಕೆನಡಾದಲ್ಲಿ ಸೆಟಲ್ ಆಗುವಂತೆ ಮಾಡುತ್ತೇವೆ. ಆದರೆ ಸಾಮಾನ್ಯ ಪಂಜಾಬಿಗಳಿಗೆ ಇವರು ಕೊಡುವ ಶುಲ್ಕ ಭರಿಸಲು ಸಾಧ್ಯವಾಗುವುದಿಲ್ಲ. ಕೆನಡಾ ಬಿಟ್ಟರೆ, ಆಸ್ಟ್ರೇಲಿಯಾ, ಇಂಗ್ಲೆಂಡ್, ಅಮೆರಿಕಕ್ಕೆ ಕಳುಹಿಸುವ ಬಗೆಗೂ ಇವು ಆಶ್ವಾಸನೆ ನೀಡುತ್ತವೆ.
ಸಾಕಷ್ಟು ಯುವಕರು ಚುನಾವಣಾ ಪ್ರಚಾರದ ಗುಂಪಿನಲ್ಲಿ ಸೇರಿಕೊಂಡಿದ್ದಾರೆ. ಇದು ತಾತ್ಕಾಲಿಕ ಸಂಪಾದನೆಯ ದಾರಿ, ರಾಜಕೀಯ ಪಕ್ಷದ ಆಸಕ್ತಿ ಅಲ್ಲ ಎನ್ನುವ 25ರ ಹರಮ್ ಪ್ರೀತ್ ಸಿಂಗ್ ರಿಂದ ಹಿಡಿದು, ಸಾಧ್ಯವಾದರೆ ಕೆನಡಾಕ್ಕೆ ಹೋಗಲು ದಾರಿಯಾದೀತೋ ಎನ್ನುವುದು ಈ ಯುವಕರಲ್ಲಿ ಹೆಚ್ಚಿನವರ ಮನದಾಸೆಯಾಗಿದೆ.