➤ ರಾಜ್ಯ ಸರಕಾರಕ್ಕೆ ರೂ.10000 ದಂಡ
ಕಳೆದ ವರ್ಷ ಮೊಹರ್ರಮ್ ಮೆರವಣಿಗೆಯ ವೇಳೆ ಖಡ್ಗವನ್ನು ಹಿಡಿದು ಸಾಗಿದ್ದಕ್ಕಾಗಿ ಮುಸ್ಲಿಮ್ ಯುವಕರ ಮೇಲೆ ಹೇರಲಾಗಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು (ಎನ್.ಎಸ್.ಎ) ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದೆ.
ಹೈಕೋರ್ಟ್ ನ ಇಂದೋರ್ ಪೀಠವು ಅಕ್ಟೋಬರ್ 6 ರಂದು ಯುವಕರ ವಿರುದ್ಧದ ಎನ್.ಎಸ್.ಎಯನ್ನು ಹಿಂದೆಗೆದಿರುವುದು ಮಾತ್ರವಲ್ಲದೆ ಕೋರ್ಟ್ ನಲ್ಲಿ ಬಂಧನ ಆದೇಶದ ಕುರಿತು “ತಪ್ಪು ಹೇಳಿಕೆ”ಯನ್ನು ಸಲ್ಲಿಸಿರುವುದಕ್ಕಾಗಿ ರಾಜ್ಯ ಸರಕಾರದ ಮೇಲೆ 10000 ರೂಪಾಯಿ ದಂಡವನ್ನು ವಿಧಿಸಿದೆ.
ಪ್ರಕರಣಕ್ಕೆ ಕಾನೂನು ವೆಚ್ಚವಾಗಿ 10000 ಪಾವತಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
19ರ ಹರೆಯದ ಆರೋಪಿ ಹಕೀಮ್ ನ ಸಹೋದರ ಸಲ್ಲಿಸಿದ ಜಂಟಿ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಸ್.ಸಿ.ಶರ್ಮಾ ಮತ್ತು ನ್ಯಾ.ಶೈಲೇಂದ್ರ ಶುಕ್ಲಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಮೊಹರ್ರಂ ಮೆರವಣಿಗೆಯ ವೇಳೆ ಖಡ್ಗವನ್ನು ಹಿಡಿದು ಸಾಗಿದ್ದಕ್ಕಾಗಿ ಹಕೀಂ ಮತ್ತು ಇತರ ಮೂವರು ಆರೋಪಿಗಳ ವಿರುದ್ಧ ಸೆ.4,2020ರಂದು ಆಯುಕ್ತರು… ಎನ್.ಎಸ್.ಎ ದಾಖಲಿಸಿದ್ದರು. ಓರ್ವನನ್ನು ಹೊರತು ಪಡಿಸಿ ಯಾವುದೇ ವ್ಯಕ್ತಿಗಳು ಯಾವುದೇ ಅಪರಾಧ ದಾಖಲೆಯನ್ನು ಹೊಂದಿರಲಿಲ್ಲ ಎಂದಿದ್ದಾರೆ.
“ಎರಡೂ ಕಡೆಗಳ ವಿಚಾರಣೆ ನಡೆಸಿದ ಬಳಿಕ, ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಕರಣದ ಕುರಿತು ಸರಿಯಾಗಿ ಮನಸ್ಸನ್ನು ಅನ್ವಯಿಸದೆ ಎನ್.ಎಸ್.ಎ ಅಡಿ ಬಂಧನಾದೇಶವನ್ನು ಜಾರಿಗೊಳಿಸಿರುವಂತೆ ತೋರುತ್ತದೆ. ಬಂಧನವು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಗಂಭೀರವಾಗಿ ಅತಿಕ್ರಮಿಸುತ್ತದೆ. ಹಾಗಾಗಿ ಇದು ಕಟ್ಟುನಿಟ್ಟಾಗಿ ಸಂವಿಧಾನ ಮತ್ತು ಕಾನೂನಿನ ಅನ್ವಯ ಜಾರಿಗೊಂಡಿದೆ ಎಂದು ಖಾತರಿಪಡಿಸುವುದು ನ್ಯಾಯಾಲಯದ ಕೆಲಸವಾಗಿದೆ” ನ್ಯಾಯಾಲಯ ಅವಲೋಕಿಸಿದೆ.
ಮೊಹರ್ರಂ ಮೆರವಣಿಗೆಯಲ್ಲಿ ಖಡ್ಗ ಹಿಡಿದು ಸಾಗಿದ್ದಕ್ಕಾಗಿ ಐವರು ಮುಸ್ಲಿಮ್ ಯುವಕರ ವಿರುದ್ಧ ಇಂಧೋರ್ ಆಯುಕ್ತರು ದಾಖಲಿಸಿದ್ದ ಎನ್.ಎಸ್.ಎ ಯನ್ನು ಇಂದೋರ್ ಹೈಕೋರ್ಟ್ ಕಳೆದ ತಿಂಗಳು ಸೆ.15ರಂದು ತಡೆಹಿಡಿದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಪೊಲೀಸರಿಗೆ ಹೇಳಿತ್ತು.
ಕೋರ್ಟ್ ಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ, ಆರೋಪಿಗಳು ಕಳೆದ ವರ್ಷದ ಮೆರವಣಿಗೆಯ ವೇಳೆ ಖಡ್ಗವನ್ನು ಅಕ್ರಮವಾಗಿ ಸಾಗಿಸಿದ್ದರು. ರಾಜ್ಯದ ಭದ್ರತೆಗೆ ತೊಂದರೆಯುಂಟುಮಾಡುವುದನ್ನು ತಡೆಯಲು ಬಂಧಿಸಲಾಗಿತ್ತು. ಮರುದಿನ ಜಿಲ್ಲಾಧಿಕಾರಿಗಳು ಎನ್.ಎಸ್.ಎ ಬಂಧನ ಆದೇಶವನ್ನು ಜಾರಿಗೊಳಿಸಿದ್ದರು ಎಂದು ಪೊಲೀಸರು ಪ್ರತಿಕ್ರಿಯಿಸಿದ್ದರು.