ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ: ಅಕ್ಟೋಬರ್ 2 ರಂದು ಚಾಲನೆ

Prasthutha|

ಬೆಂಗಳೂರು: ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಅಕ್ಟೋಬರ್ 2 ರಂದು ಚಾಲನೆ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, – ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಹಾಗೂ ಸುಮಂಗಲಿ ಸೇವ ಆಶ್ರಮ, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶವನ್ನು ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

- Advertisement -


ಸ್ತ್ರೀಶಕ್ತಿ ಸಂಘಗಳು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲು ಅನುಕೂಲವಾಗುವಂತೆ ಪ್ರಥಮ ಬಾರಿ ಆಯವ್ಯಯದಲ್ಲಿ 1.5 ಲಕ್ಷ ರೂ.ಗಳ ಆರ್ಥಿಕ ನೆರವು, ಆ್ಯಂಕರ್ ಬ್ಯಾಂಕ್ ಜೋಡಣೆ, ಯಂತ್ರೋಪಕರಣ, ಪ್ರಾಜೆಕ್ಟ್ ಗಳು, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಅಮೆಜಾನ್ ನಂತಹ ಆನ್ ಲೈನ್ ವೇದಿಕೆಗಳಲ್ಲಿ ಈ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು. ಪ್ರಾಯೋಗಿಕವಾಗಿ ಎಲಿವೇಟ್ ಕಾರ್ಯಕ್ರಮ ಪ್ರಾರಂಭಿಸಿದ್ದು, ಒಂದು ಸ್ತ್ರೀಶಕ್ತಿ ಸಂಘ ತಿಂಗಳಿಗೆ ಸುಮಾರು 50 ಲಕ್ಷ ವಹಿವಾಟನ್ನು ಮಾಡುತ್ತಿದೆ. ಇದು ಸಂಘಟಿತವಾದ ಶ್ರಮದ ಶಕ್ತಿ ಎಂದು ತಿಳಿಸಿದರು.


ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದ ಸ್ತ್ರೀಶಕ್ತಿಯ ಸಬಲೀಕರಣ ಆಗಬೇಕು. ನಮ್ಮ ಸ್ಥಳೀಯ ಮಟ್ಟದ ಸಂಘಸಂಸ್ಥೆಗಳ ಉತ್ಪನ್ನಗಳು ವಿದೇಶದಲ್ಲಿ ಮಾರಾಟವಾಗಬೇಕು ಎನ್ನುವ ಆಸೆ ಸರ್ಕಾರದ್ದು. ಆಗ ನಮ್ಮ ಆರ್ಥಿಕತೆಗೆ ಬಹಳ ಶಕ್ತಿ ಬರುತ್ತಿದೆ. ಈ ದೇಶದಲ್ಲಿನ ಮಹಿಳೆಯರ ದುಡಿಮೆಗೆ ಬೆಲೆ ಕೊಡಬೇಕಿದೆ. ಅವರಿಗೆ ಆರ್ಥಿಕ ಸ್ವಾತಂತ್ರ್ಯ ಬಂದಾಗ ಶೈಕ್ಷಣಿಕ, ಸಾಮಾಜಿಕವಾಗಿಯೂ ಸಬಲರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸೇವಾಸಂಸ್ಥೆಗಳು ಸಮಾನತೆಯ ಕ್ರಾಂತಿ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಒಳ್ಳೆಯ ಕೆಲಸ ಮಾಡುವ ಚಿಂತನೆ ಪ್ರೇರಣೆ ದೊರಕುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡುವ ಚಿಂತನೆ ಹಾಗೂ ಕ್ರಿಯಾಯೋಜನೆ ಇರಬೇಕು. ಪ್ರತಿ ವರ್ಷ ಕನಿಷ್ಠ 5 ಕ್ಷೇತ್ರ ಗಳಿಗೆ ಗುರಿ ನಿಗದಿಸಿ ಸಾಧಿಸಲು ಪ್ರಯತ್ನಸಿ, ಸರ್ಕಾರವೂ ಪೂರಕ ಸಹಕಾರವನ್ನು ನೀಡುತ್ತದೆ ಎಂದರು.

- Advertisement -


ದೇಶ ಕಟ್ಟುವ ತಳಹಂತದ ಶ್ರಮಿಕ ವರ್ಗ :
ದೇಶದ ತಲಾವಾರು ಆದಾಯದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಇದಕ್ಕೆ ಕೇವಲ ರಾಜ್ಯದ 30 % ಜನತೆ ಮಾತ್ರ ಕೊಡುಗೆ ನೀಡುತ್ತಿದ್ದು, 70% ಜನತೆ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದಾರೆ. ಈ 70% ಜನರಿಗೆ ಆರ್ಥಿಕ ನೆರವು, ಮಾರುಕಟ್ಟೆ ವ್ಯವಸ್ಥೆಗಳನ್ನು ನೀಡುವ ಮೂಲಕ ಶ್ರಮಿಕ ವರ್ಗದ ಜನರು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡುವಂತಾಗುತ್ತದೆ. ಈಗ ದುಡಿಮೆಯೇ ದೊಡ್ಡಪ್ಪ. ತಳಹಂತದ ಶ್ರಮಿಕ ವರ್ಗದಿಂದಲೇ ದೇಶ ಕಟ್ಟುವ ಕೆಲಸವಾಗುತ್ತಿದೆ ಎಂದರು.


ರೈತ ಉತ್ಪನ್ನಗಳ ಸಂಘಗಳ ಮೂಲಕ ರೈತ ಉತ್ಪನ್ನಗಳ ಮೌಲ್ಯವರ್ಧನೆ, ಹೆಚ್ಚಿನ ದರದಲ್ಲಿ ಮಾರಾಟಕ್ಕೆ ಯೋಜನೆಗಳನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದ್ದು, ಅದನ್ನು ಕರ್ನಾಟಕದಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೀನುಗಾರಿಕೆ, ಕುಶಲಕರ್ಮಿಗಳಿಗೂ ಈ ಯೋಜನೆಗಳನ್ನು ವಿಸ್ತರಣೆ ಮಾಡಲಾಗುತ್ತಿದೆ. ಚೆನ್ನಪಟ್ಟಣದಲ್ಲಿ ಆಟಿಕೆ, ಇಳಕಲ್, ಬೆಳಗಾವಿ ಶಹಾಪುರ, ಶಿಡ್ಲಘಟ್ಟ ಮತ್ತು ಮೊಳಕಾಲ್ಮೂರು ಸೀರೆ ಮೈಕ್ರೋಕ್ಲಸ್ಟರ್ ನ್ನು ಅಭಿವೃದ್ಧಿಪಡಿಸಲಾಗುವುದು. ಹೀಗೆ ಸ್ಥಳೀಯ ಕುಶಲಕರ್ಮಿಗಳ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.


ಮಹಿಳೆಯರಿಗೆ ರೂಪಿಸಿರುವ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು:
ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಸರ್ಕಾರ ನಿಮ್ಮೊಂದಿಗಿದೆ. ಮಹಿಳೆಯರು ನಿಸರ್ಗದತ್ತವಾಗಿ ಶಕ್ತಿಯನ್ನು ಹೊಂದಿರುತ್ತಾರೆ. ಶಕ್ತಿಯ ಗುಣ ತಾಳ್ಮೆ. ಅದರಿಂದಲೇ ಎಲ್ಲವನ್ನೂ ಸಾಧಿಸಲು ಸಾಧ್ಯ. ನಮ್ಮದು ಉಳಿತಾಯ ಮಾಡುವ ಸಂಸ್ಕೃತಿ. ಸಂಸ್ಕೃತಿಯ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ದುಡಿಮೆಯನ್ನು ಗುರುತಿಸಬೇಕು. ನಿಮ್ಮ ಶ್ರಮಕ್ಕೆ ಬೆಲೆ, ಸ್ಥಾನಕ್ಕೆ ಗೌರವ, ನಿಮ್ಮ ಅಸ್ತಿತ್ವಕ್ಕೆ ದೊಡ್ಡ ಗುರುತು, ಬೆಂಬಲ ಕೊಟ್ಟಾಗ ದೇಶ ಸಮೃದ್ಧವಾಗಿ ಅಭಿವೃದ್ಧಿಯಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಸರ್ಕಾರ ಮಹಿಳೆಯರಿಗೆ ರೂಪಿಸಿರುವ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದರು.


ಸುಶೀಲಮ್ಮನವರ ಸೇವೆ ನಮ್ಮೆಲರಿಗೂ ಆದರ್ಶಪ್ರಾಯ:
ಇನ್ನಷ್ಟು ಬದ್ಧತೆಯಿಂದ ಕಾರ್ಯಕ್ರಮಗಳ ಅನುಷ್ಠಾನ ಮಾಡಲಾಗುವುದು. ವಿಶೇಷವಾಗಿ ಸುಶೀಲಮ್ಮನವರ ಸೇವೆ ನಮ್ಮೆಲರಿಗೂ ಆದರ್ಶಪ್ರಾಯ ಹಾಗೂ ಮಾರ್ಗದರ್ಶಕವಾಗಿದೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡೋಣ ಎಂದರು.

Join Whatsapp