ಕೋಲಾರ: ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ಘಟಕದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ಕೋಲಾರ ಜಿಲ್ಲಾ ಎಸ್ ಎನ್ ಆರ್ ಆಸ್ಪತ್ರೆಯಲ್ಲಿ ನಡೆದಿದೆ.
ಕೋಲಾರ ನಗರದ ಕಠಾರಿಪಾಳ್ಯದಲ್ಲಿ ಮುಂಜಾನೆ ಅಪರಂಜಿ ನಾರಾಯಣಸ್ವಾಮಿ ಮತ್ತು ಗಂಗಾಧರ ಬಣಗಳ ಮಧ್ಯೆ ಜಗಳ ನಡೆದಿದೆ. ಜಗಳದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡ ಐವರು ಕೋಲಾರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಲು ಬಂದಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ದೂರು ನೀಡಲು ಬಂದ ವೇಳೆ ಆಸ್ಪತ್ರೆಯಲ್ಲಿಯೂ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳಿ ಆಸ್ಪತ್ರೆಯಲ್ಲಿ ಪರಸ್ಪರ ಹೊಡೆದಾಟ ನಡೆದಿದೆ.
ಎರಡು ಗುಂಪಿನ ಯುವಕರು ಆಸ್ಪತ್ರೆ ಸಿಬ್ಬಂದಿಯ ಬುದ್ಧಿಮಾತನ್ನು ಲೆಕ್ಕಿಸದೆ ತಳ್ಳಾಡಿ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ಘಟಕದ ಪೀಠೋಪಕರಣಗಳು ಕೂಡ ಹೊಡೆದಾಟಕ್ಕೆ ಬಳಕೆಯಾಗಿವೆ. ಇವೆಲ್ಲ ಘಟನಾವಳಿಗಳು ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.