ಭಾರತೀಯ ವಾಯುಸೇನೆಯ ಫೈಟರ್ ಜೆಟ್ ಪತನ| ಕಮಾಂಡರ್ ಬಲಿ
Prasthutha: December 25, 2021

ಜೈಪುರ: ಭಾರತೀಯ ವಾಯುಸೇನೆಯ ಫೈಟರ್ ಜೆಟ್ ಪತನಗೊಂಡು ಪೈಲಟ್ ವಿಂಗ್ ಕಮಾಂಡರ್ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಸರ್ ಬಳಿ ನಡೆದಿದೆ.
ಭಾರತೀಯ ವಾಯುಸೇನೆಯ ಮಿಗ್-21 ಫೈಟರ್ ಜೆಟ್ ಪತನಗೊಂಡು ಪೈಲಟ್ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ವಾಯುಸೇನೆ, ಶುಕ್ರವಾರ ರಾತ್ರಿ 8.30 ರ ಸುಮಾರಿಗೆ ಮಿಗ್-21 ಫೈಟರ್ ಜೆಟ್ ತರಬೇತಿ ವಿಹಾರ ಸಮಯದಲ್ಲಿ ಪಶ್ಚಿಮ ವಲಯದಲ್ಲಿ ಪತನಗೊಂಡಿದೆ. ಮತ್ತಷ್ಟು ಮಾಹಿತಿ ಬರಬೇಕಿದ್ದು, ತನಿಖೆ ಆದೇಶಿಸಲಾಗಿದೆ ಎಂದು ತಿಳಿಸಿದೆ.
ರಾಜಸ್ಥಾನದ ಸ್ಯಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಡೆಸೆರ್ಟ್ ನ್ಯಾಷನಲ್ ಪಾರ್ಕ್ ಏರಿಯಾದಲ್ಲಿ ಜೆಟ್ ಪತನಗೊಂಡಿದೆ ಎಂದು ಜೈಸರ್ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಂತರ ಮತ್ತೊಂದು ಟ್ವೀಟ್ ಮಾಡಿರುವ ವಾಯುಸೇನೆ, ಜೆಟ್ ಪತನದಲ್ಲಿ ಪೈಲಟ್ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಹುತಾತ್ಮರಾಗಿದ್ದಾರೆ ಎಂದು ಹೇಳಲು ಅತೀವ ದುಃಖವಾಗುತ್ತಿದೆ. ಈ ಸಂದರ್ಭದಲ್ಲಿ ದಿಟ್ಟ ಯೋಧನ ಕುಟುಂಬದ ಜೊತೆ ನಾವೆಲ್ಲರೂ ನಿಲ್ಲುತ್ತೇವೆ ಎಂದಿದೆ.
