ಮೈಸೂರು: ಇನ್ಸ್ಟಾಗ್ರಾಮ್ ಪೋಸ್ಟ್ ವಿಚಾರವಾಗಿ ಸ್ನೇಹಿತರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ.
ಅಂಗಟಹಳ್ಳಿಯ ಕುಚೇಲೇಗೌಡರ ಪುತ್ರ ಬೀರೇಶ್ (23) ಎಂಬ ಯುವಕ ಕೊಲೆಗೀಡಾಗಿದ್ದು, ಈತನ ಸ್ನೇಹಿತರಾದ ಗೋಕುಲ್ ರಸ್ತೆಯ ಜಿಮ್ ತರಬೇತುದಾರ ನಿತಿನ್ ಅಲಿಯಾಸ್ ವಠಾರ ಹಾಗೂ ಕಲ್ಕುಣಿಕೆಯ ಮನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಿತಿನ್ ಬಗ್ಗೆ ಕೆಟ್ಟದಾಗಿ ಇನ್ಸ್ಟಾಗ್ರಾಮ್ನಲ್ಲಿ ಬೀರೇಶ್ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ಸುದ್ದಿ ಜಿಮ್ ಟ್ರೈನರ್ ನಿತಿನ್ ಗೆ ಗಮನಕ್ಕೆ ಬಂದಿದೆ. ಇದರಿಂದ ಕೋಪಗೊಂಡ ನಿತಿನ್, ತನ್ನ ಸ್ನೇಹಿತ ಮನು ಜೊತೆ ಬೈಕಿನಲ್ಲಿ ಬೀರೇಶ್‌ನನ್ನು ಕರೆದೊಯ್ದಿದ್ದಾರೆ. ಎಪಿಎಂಸಿ ಬಳಿಯ ಬೈಪಾಸ್ ರಸ್ತೆಯಲ್ಲಿ ಈ ಪೋಸ್ಟ್ ಬಗ್ಗೆ ಬೀರೇಶ್ಗೆ ನಿತಿನ್ ಪ್ರಶ್ನಿಸಿದ್ದಾನೆ. ತಾನು ಈ ಪೋಸ್ಟ್ ಮಾಡಿಲ್ಲ ಎಂಬುದು ಬೀರೇಶ್ ಹೇಳಿಕೊಂಡಿದ್ದಾನೆ.
ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಇದು ಹೇಗಾಗಿದೆ ಗೊತ್ತಿಲ್ಲ ಎನ್ನುತ್ತಿದ್ದಂತೆ ನಿನಗೊಂದು ಗತಿ ಕಾಣಿಸುತ್ತೇನೆ ಎಂದು ಬೆನ್ನು, ಕುತ್ತಿಗೆ ಬಾಗಕ್ಕೆ ನಿತಿನ್ ಚಾಕುವಿನಿಂದ ಇರಿದಿದ್ದಾನೆ. ನೋವಿನಿಂದ ಜೋರಾಗಿ ಚೀರಿದಾಗ ಅಲ್ಲಿದ್ದ ಮರದ ವ್ಯಾಪಾರಿಯೊಬ್ಬರು ಆತನ ರಕ್ಷಣೆಗೆ ಬಂದಿದ್ದಾರೆ. ಆ ವ್ಯಾಪಾರಿಯನ್ನು ನೋಡಿದ ನಿತಿನ್ ಮತ್ತು ಮನು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಕೂಡಲೇ ಆ ವ್ಯಾಪಾರಿ ಪೊಲೀಸರಿಗೆ ಮಾಹಿತಿ ನೀಡಿದ್ದು,. ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಿರೇಶ್ ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಶಿಫ್ಟ್ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಬೀರೇಶ್ ಸಾವನ್ನಪ್ಪಿದ್ದಾರೆ.
ಆರೋಪಿಗಳು ತಲೆ ಮರೆಸಿಕೊಂಡಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.