►ಭೀಮ ವಾದ (ರಿ) ಉಡುಪಿ ಜಿಲ್ಲೆ
ಉಡುಪಿ: ರಾಜ್ಯ ಸರ್ಕಾರ ರಾಜ್ಯಾದ್ಯಂತ ಜಾರಿಗೊಳಿಸುತ್ತಿರುವ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಮೀಸಲಿಟ್ಟಿರುವ SCSP/TSP ಹಣ ದುರ್ಬಳಕೆ ಮಾಡಿಕೊಳ್ಳುವುದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆ ಇದರ ರಾಜ್ಯ ಉಪಾಧ್ಯಕ್ಷ ಶೇಖರ್ ಹಾವಂಜೆ, ಉಡುಪಿ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ ಹೇರೂರು ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಶೇಖರ್ ಹಾವಂಜೆ ಮತ್ತು ಸದಾಶಿವ ಶೆಟ್ಟಿ ಹೇರೂರು ರವರು“ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಲ್ಲಿಯೇ ದಲಿತ ವಿರೋಧಿ ಎಂಬುದನ್ನು ಸಾಬೀತು ಪಡಿಸಲು ಹೊರಟಿದೆ. ದಲಿತ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿರುವ SCSP/TSP ಯೋಜನೆಯ 11,130 ಕೋಟಿ ರೂಪಾಯಿಗಳನ್ನು ಕಾಂಗ್ರೆಸ್ ಸರಕಾರದ ಗ್ಯಾರೆಂಟಿ ಯೋಜನೆ ಗಳಿಗೆ ಬಳಸಿರುವುದು ದಲಿತ ಸಮುದಾಯಕ್ಕೆ ಮಾಡಿದ ದ್ರೋಹ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ರೀತಿ ಈ ಹಿಂದೆ ದಲಿತರ ನಿಧಿಯನ್ನು ದುರ್ಬಳಕೆ ಮಾಡಿಕೊಂಡು ಬಂದಿದ್ದ ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ದಲಿತರು ಸಿಡಿದೆದ್ದು. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದ ದಲಿತ ಸಮುದಾಯಕ್ಕೆ ನೂತನ ಕಾಂಗ್ರೆಸ್ ಸರಕಾರದ ಮಹಾ ವಂಚನೆಗೆ ಒಳಗಾಗುತ್ತಿರುವುದು ದುರಂತ. 14 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ. ಶ್ರಿ ಸಿದ್ದರಾಮಯ್ಯ ಈ ಬಾರಿ SCSP/TSP ಯೋಜನಗೆ 4079 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಮೀಸಲಿಟ್ಟಿದ್ದೇವೆಎಂದು ತಮ್ಮ ಬಜೆಟ್ ಭಾಷಣದಲ್ಲಿ ಹೇಳುತ್ತಾ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದೀಗ ದಲಿತ ವರ್ಗದಿಂದ ಛೀಮಾರಿ ಹಾಕಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಯಾವುದೇ ಕಾರಣಕ್ಕೂ ದಲಿತ ವರ್ಗಕ್ಕೆ ಈ ರೀತಿ ಅನ್ಯಾಯವಾಗುವುದನ್ನು ನಾವು ಸಹಿಸುವುದಿಲ್ಲ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ ಮಾತನಾಡಿ “ಹೇಳುವುದು ಒಂದು, ಮಾಡುವುದು ಇನ್ನೊಂದು ಕಾಂಗ್ರೆಸ್ ಸರ್ಕಾರದ ಪರಿಪಾಠ. ಈ ಬಗ್ಗೆ ರಾಜ್ಯ ವ್ಯಾಪ್ತಿ ಹೋರಾಟವನ್ನು ನಡೆಸುತ್ತೇವೆ.ನಮ್ಮ ರಾಜ್ಯ ಸಮಿತಿ ಕೂಡ ಈ ಬಗ್ಗೆ ಸಭೆಗಳನ್ನು ನಡೆಸಿ ಮುಂದೆ ಬಹುದೊಡ್ಡ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.ಈ ಮೂಲಕ ಸರ್ಕಾರದ ದಲಿತ ವಿರೋಧಿ ನೀತಿಯ ವಿರುದ್ಧ ಹೋರಾಟ ಮಾಡಲಿದ್ದೇವೆ. ನಮ್ಮ ಪ್ರತಿಭಟನೆಗೆ ಅನೇಕ ದಲಿತ ಸಂಘಟನೆಗಳು, ಇನ್ನಿತರ ಸಂಘಟನೆಗಳು,ಸಮಾನ ಮನಸ್ಕರು, ಚಿಂತಕರು, ಸಾಹಿತಿಗಳೂ ಸೇರಿದಂತೆ. ಬೆಂಬಲದ ಸುರಿಮಳೆಯೇ ಹರಿದು ಬರಲಿದೆ ” ಎಂದು ತಿಳಿಸಿದರು.