ಫಿಫಾ ವಿಶ್ವಕಪ್‌ | ಪೆನಾಲ್ಟಿ ಶೂಟೌಟ್‌ನಲ್ಲಿ ಹೊರಬಿದ್ದ ಬಲಿಷ್ಠ ಬ್ರೆಜಿಲ್‌ ! ಸೆಮಿಫೈನಲ್‌ಗೇರಿದ ಕ್ರೊಯೇಷಿಯಾ

Prasthutha|

ಐದು ಬಾರಿಯ ಚಾಂಪಿಯನ್‌ ಬಲಿಷ್ಠ ಬ್ರೆಜಿಲ್‌ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿದ  ಕ್ರೊಯೇಷಿಯಾ, ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸಿದೆ.

- Advertisement -

ಶುಕ್ರವಾರ ರಾತ್ರಿ ಎಜುಕೇಶನ್‌ ಸಿಟಿ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪೂರ್ಣಾವಧಿಯಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಗಿದ್ದವು. ಹೀಗಾಗಿ ಪಂದ್ಯ ಹೆಚ್ಚುವರಿ ಅವಧಿಗೆ ಮುಂದೂಡಲ್ಪಟ್ಟಿತು. 105+1ನೇ ನಿಮಿಷದಲ್ಲಿ ಗೋಲು ದಾಖಲಿಸಿದ ನೇಮರ್‌, ಬ್ರೆಜಿಲ್‌ ಮಹತ್ವದ ಮುನ್ನಡೆ ತಂದುಕೊಟ್ಟಿದ್ದರು. ಬಹುತೇಕ ಈ ಗೋಲಿನ ನೆರವಿನಿಂದ ಬ್ರೆಜಿಲ್‌ ಗೆಲುವಿನತ್ತ ಮುನ್ನಡೆದಿತ್ತು. ಆದರೆ ಪಂದ್ಯ ಮುಗಿಯಲು ಇನ್ನೇನು ಮೂರೇ ನಿಮಿಷ ಬಾಕಿ ಉಳಿದಿದ್ದ ವೇಳೆ (117ನೇ ನಿಮಿಷ) ಬದಲಿ ಆಟಗಾರ ಬ್ರೂನೋ ಪೆಟ್ಕೋವಿಕ್ ಎಡಗಾಲಿನ ಮೂಲಕ ದಾಖಲಿಸಿದ ಸುಂದರ ಗೋಲ್‌, ಕ್ರೊಯೇಷಿಯಾ ಪಾಳಯದಲ್ಲಿ ಸಂಭ್ರಮದ ಕಿಚ್ಚು ಹಚ್ಚಿತ್ತು.  

120 ನಿಮಿಷಗಳ ಪಂದ್ಯ ಮುಗಿದ ವೇಳೆ ಉಭಯ ತಂಡಗಳು 1-1 ಗೋಲುಗಳಿಂದ ಸಮಬಲ ಸಾಧಿತ್ತು. ಹೀಗಾಗಿ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ ನೀಡಲಾಯಿತು. ಈ ವೇಳೆ ಬ್ರೆಜಿಲ್‌ ತಂಡದ ಮೊದಲ ಅವಕಾಶವನ್ನೇ ತಡೆಯುವಲ್ಲಿ ಕ್ರೊಯೇಷಿಯಾ ಗೋಲ್‌ ಕೀಪರ್‌ ಡೊಮಿನಿಕ್ ಲಿವಾಕೋವಿಕ್ ಯಶಸ್ವಿಯಾದರು.

- Advertisement -

ಕ್ರೊಯೇಷಿಯಾ ಸತತ 4 ಪೆನಾಲ್ಟಿ ಅವಕಾಶಗಳನ್ನೂ ಗೋಲಾಗಿ ಪರಿವರ್ತಿಸಿತು. ಆದರೆ ಬ್ರೆಜಿಲ್‌ ಪರ ಮಾರ್ಕ್ವಿನೋಸ್ ಮತ್ತು ರೊಡ್ರಿಗೋ ಗುರಿ ತಲುಪುವಲ್ಲಿ ವಿಫಲರಾದರು. ಹೀಗಾಗಿ 4-2 ಅಂತರದಲ್ಲಿ ಪೆನಾಲ್ಟಿಯಲ್ಲಿ ವಿಜೇತರಾದ ಕ್ರೊಯೇಷಿಯಾ ಪಂದ್ಯವನ್ನೂ ಗೆದ್ದು ಸೆಮಿಫೈನಲ್‌ ತಲುಪಿತು.

ರಷ್ಯಾದಲ್ಲಿ ನಡೆದ ಕಳೆದ ಬಾರಿಯ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಪೈನಲ್‌ ತಲುಪಿದ್ದ ಕ್ರೊಯೇಷಿಯಾ, ಪ್ರಶಸ್ತಿ ಸುತ್ತಿನಲ್ಲಿ ಫ್ರಾನ್ಸ್‌ ವಿರುದ್ಧ ಸೋಲನುಭವಿಸಿತ್ತು.



Join Whatsapp