ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಜಪಾನ್ ಮತ್ತು ಕ್ರೊವೇಷಿಯಾ ತಂಡಗಳ ನಡುವೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಗೂ ಕ್ರೊವೇಷಿಯಾ ಗೆಲುವಿನ ನಗೆ ಬೀರಿದೆ.
ಪೂರ್ಣಾವಧಿಯಲ್ಲಿ ಸಮಬಲ ಸಾಧಿಸಿ, ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಾಗದೆ ಪೆನಾಲ್ಟಿ ಶೂಟೌಟ್‌ಗೆ ಮುಂದೂಡಲ್ಪಟ್ಟ ರೋಚಕ ಪಂದ್ಯದಲ್ಲಿ ಕ್ರೊವೇಷಿಯಾ, ಜಪಾನ್ ವಿರುದ್ಧ ವೀರೋಚಿತ ಜಯ ಸಾಧಿಸಿದೆ.
ಕತಾರ್‌ನ ಅಲ್ ಜನೌಬ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿಕ್ವಾರ್ಟರ್ ಪಂದ್ಯವು ಅಭಿಮಾನಿಗಳಿಗೆ 120+ ನಿಮಿಷಗಳ ಕಾಲ ರಸದೌತಣ ನೀಡಿತ್ತು. ಪೂರ್ಣಾವಧಿಯಲ್ಲಿ (90 ನಿಮಿಷ) 1-1 ಗೋಲುಗಳಿಂದ ಪಂದ್ಯ ಸಮಬಲಗೊಂಡ ಕಾರಣ ಪಂದ್ಯವು ಹೆಚ್ಚುವರಿ ಅವಧಿಗೆ (30 ನಿಮಿಷ) ಮುಂದೂಡಲ್ಪಟ್ಟಿತ್ತು. ಆದರೆ ಹೆಚ್ಚುವರಿ ಅವಧಿಯಲ್ಲೂ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಯಿತು.
ಅಂತಿಮವಾಗಿ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು. ಈ ವೇಳೆ ಕ್ರೊಯೇಷಿಯಾ ಗೋಲ್‌ಕೀಪರ್ ಡೊಮಿನಿಕ್ ಲಿವಾಕೊವಿಕ್ ಜಪಾನ್ ತಂಡದ ಪಾಲಿಗೆ ತಡೆಗೋಡೆಯಾದರು. ಜಪಾನ್ ತಂಡದ ಮೂವರು ಆಟಗಾರರ ಪೆನಾಲ್ಟಿಯನ್ನು ತಡೆದ ಡೊಮಿನಿಕ್, ತನ್ನ ತಂಡವನ್ನು ಅಂತಿಮ 8ರ ಘಟ್ಟಕ್ಕೆ ಕೊಂಡೊಯ್ದರು.