ಮಂಗಳೂರು: ಬಂಟ್ವಾಳದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್ ಬಗ್ಗೆ ಕೆಲವೊಂದು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗಿದ್ದು, ಇಂತಹ ಎಲ್ಲಾ ವಿಚಾರಗಳು ಸತ್ಯಕ್ಕೆ ದೂರವಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಅಡ್ವೊಕೇಟ್ ಅಶ್ರಫ್ ಅಗ್ನಾಡಿ ಹೇಳಿದ್ದಾರೆ.
ಎಲ್ಲಾ ವರ್ಗಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಫ್ರೀಡಂ ಕಮ್ಯುನಿಟಿ ಸಭಾಂಗಣವನ್ನು ರಚಿಸಲಾಗಿದೆ. ಈ ಸಭಾಂಗಣವು ಪುತ್ತೂರು, ಸುಳ್ಯ, ಬಂಟ್ವಾಳ ಮತ್ತು ಕಡಬ ತಾಲೂಕಿನ ಎಲ್ಲಾ ವರ್ಗಗಳಿಗೂ ಉಪಯುಕ್ತ ಸೇವೆಯನ್ನು ನೀಡುತ್ತಿದೆ. ಈ ಸಭಾಂಗಣದಲ್ಲಿ ಮಿತ ದರದಲ್ಲಿ ಮದುವೆ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಕಾನೂನು ಮಾಹಿತಿ ಶಿಬಿರಗಳು, ವ್ಯಕ್ತಿತ್ವ ವಿಕಸನ ಶಿಬಿರಗಳು, ಸ್ಕಾಲರ್ ಶಿಪ್, ಸರಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಾಗಾರಗಳು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜಾಗೃತಿಯ ಬಗ್ಗೆ ಮಾಹಿತಿಗಳು, ಯುವಕರಿಗೆ ವೃತ್ತಿ ಮಾರ್ಗದರ್ಶನಗಳು ಮೊದಲಾದ ಸಮುದಾಯ ಅಭಿವೃದ್ಧಿ ಚಟುವಟಿಕೆಗಳು ಮತ್ತು ಪ್ರವಾಹದಂತಹ ವಿಪತ್ತಿನ ಸಂದರ್ಭದಲ್ಲಿ ಪರಿಹಾರದ ಬಗ್ಗೆ ಮಾಹಿತಿ ಕಾರ್ಯಾಗಾರಗಳಿಗೆ ಅವಕಾಶವನ್ನು ನೀಡಲಾಗುತ್ತಿದೆ.
ಇಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳೂ ಕಾನೂನಿನ ವ್ಯಾಪ್ತಿಯಲ್ಲೇ ನಡೆಯುತ್ತಿದ್ದು, ಇದರ ಕುರಿತಾದ ಎಲ್ಲಾ ದಾಖಲೆಗಳೂ ಸಂಸ್ಥೆಯಲ್ಲಿ ಲಭ್ಯವಿದೆ. ವಿಶೇಷವಾಗಿ ಕೊರೋನ ಸಾಂಕ್ರಾಮಿಕದ ವೇಳೆ ಮುಸ್ಲಿಮ್ ಸಂಘಟನೆಗಳು ನಡೆಸಿದ ಪರಿಹಾರ ಮತ್ತು ವೈದ್ಯಕೀಯ ಸೇವೆಗಳಿಗೆ ಈ ಸಭಾಂಗಣವನ್ನು ಮೀಸಲಾಗಿರಿಸಲಾಗಿತ್ತು. ಈ ಸಭಾಂಗಣವು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದ್ದು, ಎಲ್ಲ ಸಂದರ್ಭಗಳಲ್ಲಿ ಇಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಪೊಲೀಸ್ ಇಲಾಖೆಗೂ ಮಾಹಿತಿ ನೀಡಲಾಗುತ್ತಿದೆ. ಹಾಗೆಯೇ ಸೆ.6ರಂದು ಪ್ರಕರಣವೊಂದರ ತನಿಖೆಗಾಗಿ ಎನ್.ಐ.ಎ. ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ಸೂಕ್ತ ರೀತಿಯ ಸಹಕಾರ ನೀಡಿದ್ದಾರೆ. ಅಲ್ಲಿ ತನಿಖಾ ಸಂಸ್ಥೆಗೆ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳು ನಡೆದಿರುವುದು ಕಂಡು ಬಂದಿಲ್ಲ. ಎಂದು ಅಶ್ರಫ್ ಅಗ್ನಾಡಿ ವಿವರವಾಗಿ ಹೇಳಿದ್ದಾರೆ.
ಸಾಮಾಜಿಕ, ಸಾಮುದಾಯಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಸಭಾಂಗಣದ ಬಗ್ಗೆ ಕೆಲವೊಂದು ಸುದ್ದಿ ಮಾಧ್ಯಮಗಳಲ್ಲಿ ಅತಿರಂಜಿತ ವರದಿ ಪ್ರಸಾರವಾಗಿರುವುದು ವಿಪರ್ಯಾಸವಾಗಿದೆ. ಸುಳ್ಳು ಸುದ್ದಿ ಹರಡುವ ಮೂಲಕ ಸಂಸ್ಥೆಯ ವರ್ಚಸ್ಸಿಗೆ ಧಕ್ಕೆ ತಂದ ಸಂಘಟನೆಗಳ ಮುಖಂಡರು ಮತ್ತು ಮಾಧ್ಯಮಗಳ ವಿರುದ್ಧ ಸಂಸ್ಥೆಯು ಕಾನೂನು ಕ್ರಮಕ್ಕೆ ಮುಂದಾಗಲಿದೆ ಎಂದೂ ಅಡ್ವೊಕೇಟ್ ಅಶ್ರಫ್ ಅಗ್ನಾಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.