ಸೆಪ್ಬಂಬರ್ 5 ರಿಂದ ಫಿಬಾ U-18 ಮಹಿಳಾ ಏಷ್ಯನ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ಆರಂಭ: ಸಚಿವ ಡಾ.ನಾರಾಯಣಗೌಡ

Prasthutha|

ಬೆಂಗಳೂರು: ಬೆಂಗಳೂರಿನಲ್ಲಿ ಸೆಪ್ಟೆಂಬರ್ 5 ರಿಂದ 11 ರವರೆಗೂ ಫಿಬಾ ಅಂಡರ್ 18 ಮಹಿಳಾ‌ ಏಷ್ಯನ್ ಬಾಸ್ಕೆಟ್ ಬಾಲ್‌ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.

- Advertisement -

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ನಡೆಯಲಿದೆ. ಭಾರತ, ಜಪಾನ್, ಚೀನಾ, ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಒಟ್ಟು 16 ತಂಡಗಳು ಭಾಗಿಯಾಗಲಿವೆ. ಈ ಕ್ರೀಡಾಕೂಟದಲ್ಲಿ 16 ಅಂತಾರಾಷ್ಟ್ರೀಯ ತಂಡಗಳ 192 ಕ್ರೀಡಾಪಟುಗಳು, 96 ಅಧಿಕಾರಿಗಳು, 100 ಸ್ವಯಂಸೇವಕರು ಭಾಗವಹಿಸಲಿದ್ದಾರೆ. ಈ ಕ್ರೀಡಾಕೂಟದಲ್ಲಿ ವಿಜೇತರಾದ ಮೊದಲ 4 ತಂಡಗಳು 2023ರ ಜುಲೈನಲ್ಲಿ ಸ್ಪೈನ್‌ನಲ್ಲಿ ನಡೆಯಲಿರುವ ಅಂಡರ್- 19 ಮಹಿಳೆಯರ ಫಿಬಾ ವಿಶ್ವ ಕಪ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದರು.

ಈ ಕ್ರೀಡಾಕೂಟಕ್ಕೆ ಫೆಡರೇಷನ್ ಆಫ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೂ ಈ ಟೂರ್ನಿಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುತ್ತಿದೆ. ಮುಕ್ತಾಯ ಸಮಾರಂಭ 11 ನೇ ತಾರೀಖಿನಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಬೆಂಗಳೂರಿಗೆ ಈ ಕ್ರೀಡಾಕೂಟದ ಆತಿಥ್ಯವಹಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರಿಗೆ ಸಂತಸ ತಂದಿದೆ. ವಿಶ್ವದರ್ಜೆಯ ಯಾವುದೇ ಕ್ರೀಡಾಕೂಟವನ್ನು ಆಯೋಜಿಸಲು ನಾವು ಸಶಕ್ತರಾಗಿದ್ದೇವೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

- Advertisement -

ಇದೇ ವೇಳೆ ಇರಾನ್‌ ನಲ್ಲಿ ನಡೆಯಲಿರುವ ಫಿಬಾ ಅಂಡರ್ 18 ಪುರುಷರ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಆಟಗಾರರಿಗೆ ಕಿಟ್‌ ಗಳನ್ನು ನೀಡಿ ಶುಭ ಹಾರೈಸಿದರು.

ಇಂಡಿಯನ್ ಬಾಸ್ಕೆಟ್ ಬಾಲ್ ಫೆಡರೇಷನ್ ಅಧ್ಯಕ್ಷ ಕೆ ಗೋವಿಂದರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಉಪಸ್ಥಿತರಿದ್ದರು.

Join Whatsapp