ಹೆಣ್ಣು ಭ್ರೂಣ ಹತ್ಯೆ: ಮಂಗಳೂರು ಮೂಲದ ಸ್ಕ್ಯಾನಿಂಗ್‌ ಯಂತ್ರ ಪೂರೈಕೆದಾರ ಸಹಿತ ಇಬ್ಬರ ಸೆರೆ

Prasthutha|

ಬೆಂಗಳೂರು: ಮಂಡ್ಯದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಜತೆಗೆ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿದ್ದ ಸ್ಕ್ಯಾನಿಂಗ್‌ ಯಂತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಲ್ಲಿ‌ ಓರ್ವ ಮಂಗಳೂರಿನವರು ಆಗಿದ್ದಾರೆ.

- Advertisement -

ಮಂಗಳೂರಿನ ಆವಿಷ್ಕಾರ ಬ್ರದರ್ಸ್‌ ಬಯೋಮೆಡಿಕಲ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ ಮಾಲಕ ಎಂ. ಲಕ್ಷ್ಮಣ್‌ ಗೌಡ ಮತ್ತು ದಾವಣಗೆರೆ ಮೂಲದ ಸಿದ್ದೇಶ್‌ ಬಂಧಿತರು.

ಮೂರು ಮೈಕ್ರೋ ಸ್ಕ್ಯಾನಿಂಗ್‌ ಯಂತ್ರಗಳನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ ಎಂದು ಸಿಐಡಿ ಪೊಲೀಸರು ಮಾಹಿತಿ ನೀಡಿದರು.

- Advertisement -

ಆರೋಪಿಗಳ ಪೈಕಿ ಲಕ್ಷ್ಮಣ್‌ಗೌಡ ಪರವಾನಿಗೆ ಪಡೆದು ಮಂಗಳೂರಿನಲ್ಲಿ ಅವಿಸ್ಕಾರ ಬ್ರದರ್ಸ್‌ ಬಯೋಮೆಡಿಕಲ್‌ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಅಲ್ಟ್ರಾಸೌಂಡ್‌/ಇಮೇಜಿಂಗ್‌ ಮೆಷಿನ್‌ಗಳ ಮಾರಾಟ, ಮರು ಖರೀದಿ ಮತ್ತು ರಿಪೇರಿ ಮಳಿಗೆ ನಡೆಸುತ್ತಿದ್ದ. ಈತ ತನ್ನ ಮಳಿಗೆಯಿಂದ 3 ಮೈಕ್ರೋ ಸ್ಕ್ಯಾನಿಂಗ್‌ ಯಂತ್ರಗಳನ್ನು ಮಂಡ್ಯದ ಕೆ.ಆರ್‌.ಪೇಟೆ ನಿವಾಸಿ ಆಯುರ್ವೇದಿಕ್‌ ವೈದ್ಯ ಮಲ್ಲಿಕಾರ್ಜುನ ಎಂಬಾತನಿಗೆ ಮಾರಾಟ ಮಾಡಿದ್ದ. ಈತ ಮೂರು ಯಂತ್ರಗಳನ್ನು ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚುವ ಆರೋಪಿಗಳಿಗೆ ಮಾರಾಟ ಮಾಡಿದ್ದ. ಈ ಪೈಕಿ ಒಂದು ಯಂತ್ರವನ್ನು ಚನ್ನರಾಯಪಟ್ಟಣ ಟೌನ್‌ನಲ್ಲಿ ಸತ್ಯ ಎಂಬಾತನಿಗೆ ಮಾರಾಟ ಮಾಡಿದ್ದ. ಸತ್ಯ ಎಂಬಾತ ತನ್ನ ಮನೆಯಲ್ಲೇ ಸ್ಕ್ಯಾನಿಂಗ್‌ ಯಂತ್ರ ಇಟ್ಟುಕೊಂಡು ಮಲ್ಲಿಕಾರ್ಜುನ್‌ನನ್ನು ಮನೆಗೆ ಕರೆಸಿಕೊಂಡು ಹೆಣ್ಣೂ ಭ್ರೂಣ ಲಿಂಗ ಪತ್ತೆ ಹಚ್ಚುವ ಅಕ್ರಮ ದಂಧೆ ನಡೆಸುತ್ತಿದ್ದ.

ಈ ಮಾಹಿತಿ ಮೇರೆಗೆ 2023ರ ಫೆ.11ರಂದು ಚನ್ನರಾಯಪಟ್ಟಣ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ವೇಳೆ ಆರೋಪಿಗಳು ಪರವಾನಿಗೆ ಇಲ್ಲದೇ ಸ್ಕ್ಯಾನಿಂಗ್‌ ಯಂತ್ರ ಇಟ್ಟುಕೊಂಡು ಭ್ರೂಣ ಪರೀಕ್ಷೆ ಮಾಡುತ್ತಿರುವುದು ಪತ್ತೆಯಾಗಿತ್ತು. ಇಬ್ಬರ ಬಳಿಯಿದ್ದ ಒಂದು ಸ್ಕ್ಯಾನಿಂಗ್‌ ಯಂತ್ರವನ್ನು ಜಪ್ತಿ ಮಾಡಲಾಗಿತ್ತು.

ಇನ್ನು ಈತನ ಚಿಕಿತ್ಸಾ ಕೇಂದ್ರದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಪ್ರಕಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿದ್ದ ವೀರೇಶ್‌, ಸಿದ್ದೇಶ್‌ ಹಾಗೂ ಇತರೆ ಆರೋಪಿಗಳ ಜತೆ ಸೇರಿ ಲಕ್ಷ್ಮಣ್‌ಗೌಡನಿಂದ ಮೂರು ಸ್ಕ್ಯಾನಿಂಗ್‌ ಯಂತ್ರಗಳನ್ನು ಖರೀದಿ ಮಾಡಿದ್ದರು. ಅದನ್ನು ಮಂಡ್ಯದ ಆಲೆಮನೆಯಲ್ಲಿ ಇಟ್ಟುಕೊಂಡು ಗರ್ಭಿಣಿಯರನ್ನು ಪತ್ತೆ ಹಚ್ಚಿ, ಸ್ಕ್ಯಾನಿಂಗ್‌ ಮಾಡಿಸುತ್ತಿದ್ದರು. ಒಂದು ವೇಳೆ ಹೆಣ್ಣು ಭ್ರೂಣ ಎಂಬುದು ಖಾತ್ರಿಯಾದ ಕೂಡಲೇ ಮೈಸೂರಿನ ವೈದ್ಯ ಚಂದನ್‌ ಬಲ್ಲಾಳ್‌ ಮತ್ತು ತಂಡದಿಂದ ಗರ್ಭಪಾತ ಮಾಡಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಸಿದ್ದೇಶ್‌ ಬಳಿಯಿದ್ದ 3 ಸ್ಕ್ಯಾನಿಂಗ್‌ ಯಂತ್ರಗಳು:

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಸಿದ್ದೇಶ್‌, ಸ್ಕ್ಯಾನಿಂಗ್‌ ಯಂತ್ರಗಳ ಸಮೇತ ಪರಾರಿಯಾಗಿದ್ದ. ಈತನ ಆಪ್ತನಾಗಿದ್ದ ವಿರೇಶ್‌, ಶಿವಕುಮಾರ್‌ ಹಾಗೂ ಇತರರನ್ನು ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಯ ಸುಳಿವು ಸಿಕ್ಕಿತ್ತು. ಇದೀಗ ಆರೋಪಿಯನ್ನು ಬಂಧಿಸಿ, ಆತನ ಬಳಿಯಿದ್ದ ಮೂರು ಸ್ಕ್ಯಾನಿಂಗ್‌ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಐಡಿ ಪೊಲೀಸರು ಹೇಳಿದರು.



Join Whatsapp