ಮಂಗಳೂರು: ನಗರದ ಸಂದೇಶ ಪ್ರತಿಷ್ಠಾನದ ನಿರ್ದೇಶಕರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ರೆ.ಫಾ. ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡಾ ಇವರ ಬೀಳ್ಕೊಡುಗೆ ಕಾರ್ಯಕ್ರಮವು ನಗರದ ನಂತೂರಿನ ಸಂದೇಶ ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಧರ್ಮಪ್ರಾಂತ ಸಾರ್ವಜನಿಕ ಸಂಪರ್ಕ ಅಧಿಕಾರಿ ರೆ.ಫಾ. ಜೆ.ಬಿ. ಸಲ್ದಾನ ಸನ್ಮಾನ ನೆರವೇರಿಸಿದರು. ಬಳಿಕ ಅಸ್ಸಿಸ್ಸಿ ಡಿ’ಅಲ್ಮೇಡಾ ಅವರ ಹಿತೈಷಿ, ಅಭಿಮಾನಿಗಳು ಗೌರವಿಸಿ ಶುಭ ಹಾರೈಸಿದರು.
ಈ ಸಂದರ್ಭ ಮಾತನಾಡಿದ ರೆ.ಫಾ. ಜೆ.ಬಿ. ಸಲ್ದಾನ, ಫ್ರಾನ್ಸಿಸ್ ಅಸ್ಸಿಸ್ಸಿ ತಾನು ನಿರ್ದೇಶಕನಾಗಿ ನಿರ್ವಹಿಸಿದ್ದ ಮೂರು ವರುಷಗಳಲ್ಲಿ ಸಮಾಜಕ್ಕೆ ಉತ್ತಮವಾದ ಸೇವೆ ಒದಗಿಸಿದ್ದಾರೆ. ಶೈಕ್ಷಣಿಕ ಅವಧಿಯಲ್ಲೇ ಚುರುಕಿನ ಮತ್ತು ಉತ್ತಮ ನಾಯಕತ್ವ ಹೊಂದಿರುವ ವ್ಯಕ್ತಿತ್ವವುಳ್ಳರಾಗಿದ್ದರು. ಕೇವಲ ಕ್ರೈಸ್ತ ಸಮುದಾಯದ ಏಳಿಗೆಗಾಗಿ ಮಾತ್ರವಲ್ಲ ಎಲ್ಲ ಸಮುದಾಯವನ್ನು ಜೊತೆಗೂಡಿಸಿ ಕರೆದೊಯ್ಯುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸರ್ವರಿಗೆ ಸ್ಪಂದಿಸುವ ಮೂಲಕ ದೇವ ಭಕ್ತಿಯನ್ನು ಕಾಣಲು ಅವರಲ್ಲಿ ಸಾಧ್ಯವಾಗಿತ್ತು. ಹೀಗಾಗಿಯೇ ಅವರನ್ನು ಸಂದೇಶ ಪ್ರತಿಷ್ಠಾನಕ್ಕೆ ಆಯ್ಕೆ ಮಾಡಲಾಗಿತ್ತು ಎಂದರು.
ಇನ್ನು ಕೋವಿಡ್ ಸಮಯದಲ್ಲಿ ಆನ್ ಲೈನ್ ಮೂಲಕ ಸಂಗೀತ ವಿದ್ಯೆಯನ್ನು ಕಲಿಸುವ ಮೂಲಕ ಸಂದೇಶ ಪ್ರತಿಷ್ಠಾನದ ಹಿರಿಮೆ ಹೆಚ್ಚಿಸಿದ ಕೀರ್ತಿ ಅಸ್ಸಿಸಿ ಡಿ’ಅಲ್ಮೇಡಾ ಅವರಿಗೆ ಸಲ್ಲುತ್ತದೆ. ಅವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಜೆ.ಬಿ. ಸಲ್ದಾನ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರೆ.ಫಾ. ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡಾ, ಮೂರು ವರ್ಷಗಳ ಕಾಲ ನಿರ್ದೇಶಕನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರತಿಷ್ಠಾನಕ್ಕೆ ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭ ನೂತನ ನಿರ್ದೇಶಕರಾಗಿ ಆಗಮಿಸಿದ ಪ್ರೊ. ಜಾನ್ ಡಿಸಿಲ್ವ ಇವರನ್ನು ಆತ್ಮೀಯವಾಗಿ ಪ್ರತಿಷ್ಠಾನವು ಬರಮಾಡಿಕೊಂಡಿತು.
ವೇದಿಕೆಯಲ್ಲಿ ರೋಯ್ ಕ್ಯಾಸ್ಟಲಿನೋ, ನೂತನ ನಿರ್ದೇಶಕ ಪ್ರೊ. ಜಾನ್ ಡಿಸಿಲ್ವ ಉಪಸ್ಥಿತರಿದ್ದರು