ಕಲಿತ ಶಾಲೆಯಲ್ಲೇ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಗೆ ಸನ್ಮಾನ, ಕೃತಿ ಬಿಡುಗಡೆ

Prasthutha|

ಮಂಗಳೂರು : ಸಾಹಿತಿ, ಲೇಖಕ, ಕವಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು ಪ್ರಾಥಮಿಕ ಶಿಕ್ಷಣ ಪಡೆದ ಜೋಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಜೋಕಟ್ಟೆಯ ಅಭಿಮಾನಿ ನಾಗರಿಕರಿಂದ ಹುಟ್ಟೂರಿನ ಸನ್ಮಾನ ಮತ್ತು “ಆಯುರ್ವೇದ ಭೂಷಣ, ಸಮಾಜ ಬಂಧು ಡಾ.ಐ.ವಿ.ರಾವ್” ಎಂಬ ಶ್ರೀನಿವಾಸ ಜೋಕಟ್ಟೆಯವರ 38ನೇ ಕೃತಿಯ ಬಿಡುಗಡೆ ಸಮಾರಂಭ ನಡೆಯಿತು.

- Advertisement -

ಹುಟ್ಟೂರಿನ ಬಾಲ್ಯದ ನೆನಪುಗಳು, ಒಡನಾಟ, ಉದ್ಯೋಗ ನಿಮಿತ್ತ ಮುಂಬೈಗೆ ತೆರಳಿ ಪತ್ರಕರ್ತನಾಗಿ ಅಲ್ಲಿನ ಅನುಭವಗಳನ್ನು ಅವರು ಹಂಚಿಕೊಂಡರು. ತನ್ನ ತಂದೆ ಡಾ.ಐ.ವಿ.ರಾವ್ ರವರ ಬಗ್ಗೆ ಬರೆದ ತನ್ನ 38ನೇ ಕೃತಿಯನ್ನು ಬಿಡುಗಡೆಗೊಳಿಸಿ ಡಾ.ಐ.ವಿ.ರಾವ್ ರವರ ವೈದ್ಯವೃತ್ತಿ, ಜೀವನ ಶೈಲಿ ಮತ್ತು ಸಮಾಜ ಸೇವೆಯ ಹಲವಾರು ಮಜಲುಗಳನ್ನು ಸಭಿಕರಿಗೆ ಮನವರಿಕೆ ಮಾಡಿ ಕೊಟ್ಟರು.

ಲೇಖಕರನ್ನು ಜೋಕಟ್ಟೆಯ ಹಿರಿಯ ನಾಗರಿಕ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಹಾಜಿ ಟಿ.ಎ. ಆಲಿಯಬ್ಬ ಶಾಲು ಹೊದಿಸಿ ಫಲಪುಷ್ಪ ನೀಡಿ “ಜೋಕಟ್ಟೆ ಸುಪುತ್ರ” ಎಂಬ  ಸ್ಮರಣಿಕೆ ನೀಡಿ ಸನ್ಮಾನಿಸಿದರು. ಲೇಖಕ, ಅಂಚೆ ಇಲಾಖೆಯ ನಿವೃತ್ತ ಪೋಸ್ಟ್ ಮಾಸ್ಟರ್ ವಿಲಿಯಮ್ ಲೋಬೊ ಶ್ರೀನಿವಾಸರ 38 ನೇ ಕೃತಿಯನ್ನು ಬಿಡುಗಡೆಗೊಳಿಸಿದರು.

- Advertisement -

ಸಭೆಯ ಅಧ್ಯಕ್ಷತೆಯನ್ನು ಜೋಕಟ್ಟೆಯ ಶ್ರೀ ವಿಜಯ ವಿಠಲ ಭಜನಾ ಮಂದಿರದ ಅಧ್ಯಕ್ಷರಾದ ಪುಷ್ಪರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೋಕಟ್ಟೆಯ ಅಂಜುಮನ್ ಖುವ್ವತುಲ್ ಇಸ್ಲಾಮ್ ಸಂಸ್ಥೆಯ ಅಧ್ಯಕ್ಷ ಹಾಜಿ ಟಿ. ಅಬೂಬಕ್ಕರ್, ಅಥಾವುಲ್ಲಾ ಜೋಕಟ್ಟೆ, ಅಂಜುಮನ್ ವಿದ್ಯಾಸಂಸ್ಥೆಯ ಸಂಚಾಲಕರಾದ ಸಿರಾಜ್ ಮನೆಗಾರ, ತಾಲೂಕು ಪಂಚಾಯತ್ ಸದಸ್ಯ ಬಶೀರ್, ಗ್ರಾಮ ಪಂಚಾಯತ್ ಸದಸ್ಯ ಶಿಹಾಬುದ್ದೀನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಯ್ಯದ್ದಿ, ಶ್ರೀನಿವಾಸ್ ರ ಸಹೋದರ ಶ್ರೀಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸನ್ಮಾನಿತರಿಗೆ ಶುಭ ಹಾರೈಸಿದರು.

ಕವಿ, ಉದ್ಯಮಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರಾದ ಮುಹಮ್ಮದ್ ಶರೀಫ್ ನಿರ್ಮುಂಜೆ ಅವರು ಸುಶ್ರಾವ್ಯ ಹಾಡಿನ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಶರೀಫ್ ಅವರೇ ಕಾರ್ಯಕ್ರಮವನ್ನು ನಿರೂಪಿಸಿದರು.

Join Whatsapp