ದೇಶವು ಮತ್ತೆ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಿದೆ. ಆದರೆ ನೈಜ ಸ್ವಾತಂತ್ರ್ಯದ ಪರಿಕಲ್ಪನೆಯು ಬಾನೆತ್ತರಕ್ಕೆ ಹಾರುವ ತಿರಂಗ ಧ್ವಜದಡಿಯಲ್ಲಿ ಲೀನವಾಗಿ ಹೋಗುತ್ತಿದೆ. ಎಲ್ಲಾ ವರ್ಗದ ಜನರಿಗೆ ಸಮಾನತೆಯ ಬದುಕನ್ನು ಕಟ್ಟಿಕೊಟ್ಟ ಸಂವಿಧಾನವು ಸರ್ವಾಧಿಕಾರದ ತೆಕ್ಕೆಯಲ್ಲಿ ಕೊಚ್ಚಿ ಹೋಗುತ್ತಿದೆ. “ಸ್ವಾತಂತ್ರ್ಯ ಹೋರಾಟವು ಕೇವಲ ರಾಜಕೀಯ ಸ್ವಾತಂತ್ರ್ಯ ಕ್ಕಾಗಿ ನಡೆದ ಹೋರಾಟವಲ್ಲ. ದೇಶದ ಬಾಹ್ಯ ಸ್ವಾತಂತ್ರ್ಯಕ್ಕಿಂತ ಆಂತರಿಕ ಸ್ವಾತಂತ್ರ್ಯ ಬಹುಮುಖ್ಯವಾಗುತ್ತದೆ ” ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಪಾದಿಸಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಕಾಣುತ್ತಿರುವುದು ರಾಜಕೀಯ ಸ್ವಾತಂತ್ರ್ಯ ಮಾತ್ರವಾಗಿದೆ.
2016 ನವೆಂಬರ್ ನಲ್ಲಿ ದಿನ ಬೆಳಗಾಗುವುದರೊಳಗೆ ನೋಟು ಅಮಾನ್ಯೀಕರಣಗೊಳಿಸಿ ಬ್ಯಾಂಕುಗಳ ಮುಂದೆ ಜನ ಕ್ಯೂ ನಿಂತು ಕುಸಿದು ಬೀಳುವಂತಾದಾಗ ಆರ್ಥಿಕ ಸ್ವಾತಂತ್ರ್ಯದ ಹರಣವಾಯಿತು. ಆಹಾರ ಪದ್ಧತಿ, ವಸ್ತ್ರ ವಿಧಾನ, ಅಸ್ಪೃಶ್ಯತೆಯ ಹೆಸರಿನಲ್ಲಿ ಅಲ್ಪಸಂಖ್ಯಾತರು , ದಲಿತರ ಮೇಲೆ ದಿನಂಪ್ರತಿ ನಡೆಯುತ್ತಿರುವ ಕ್ರೌರ್ಯಗಳು ಭಯ ಮತ್ತು ಅಭದ್ರತೆಯ ವಾತಾವರಣ ಉಂಟಾದಾಗ ಸಾಮಾಜಿಕ ಸ್ವಾತಂತ್ರ್ಯ ಇನ್ನಿಲ್ಲವಾಯಿತು. ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಲೇಖಕರನ್ನು, ಚಿಂತಕರನ್ನು, ನಿಷ್ಠಾವಂತ ಪತ್ರಕರ್ತರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸಿ ಬಂಧಿಸುತ್ತಿರುವಾಗ ಅಭಿವ್ಯಕ್ತಿ ಸ್ವಾತಂತ್ರ್ಯವು ಮರೀಚಿಕೆಯಾಯಿತು. ಇನ್ನು ಸ್ವಾತಂತ್ರ್ಯೊತ್ಸವದ ಆಚರಣೆಯು ಕೇವಲ ಆಡಂಬರವಷ್ಟೇ.
” ಸಂವಿಧಾನ ಎಷ್ಟೇ ಉತ್ತಮವಾಗಿರಲಿ, ಕೆಟ್ಟ ಆಡಳಿತಗಾರನ ಕೈಯಲ್ಲಿ ಅದು ಕೆಟ್ಟದಾಗಿಯೇ ಜಾರಿಗೊಳ್ಳುತ್ತದೆ. ಸಂವಿಧಾನದಲ್ಲಿ ಎಷ್ಟೇ ಕೆಡುಕಿರಲಿ , ಒಬ್ಬ ಒಳ್ಳೆಯ ಆಡಳಿತಗಾರನ ಕೈಯಲ್ಲಿ ಅದು ಒಳಿತಾಗಿಯೇ ಜಾರಿಗೊಳ್ಳುತ್ತದೆ. ” ಹೀಗೆ ಹೇಳಿದವರು ಸ್ವತಃ ಸಂವಿಧಾನದ ಕರ್ತೃ ಡಾ. ಅಂಬೇಡ್ಕರ್. ಇತ್ತೀಚಿನ ವರ್ಷಗಳಲ್ಲಿ ಅದು ನಿಜವಾಗುತ್ತಿದೆ. ಗಾಂಧೀಜಿಯನ್ನು ಕೊಂದ ಗೋಡ್ಸೆ ಸಂತತಿಗಳನ್ನು , ದೇಶದೊಳಗಿನ ಸ್ಫೋಟಕ ಕೃತ್ಯಗಳ ರುವಾರಿಗಳಾದ ಸಾಧ್ವಿ ಪ್ರಜ್ಞಾಸಿಂಗ್ ರಂತ ಸಂಘೀ ಮನಸ್ಥಿತಿಗಳನ್ನು ದೇಶಪ್ರೇಮಿಗಳಾಗಿ ಬಿಂಬಿಸಲಾಗುತ್ತಿದೆ. ಸಂವಿಧಾನ, ಪ್ರಜಾಪ್ರಭುತ್ವ, ಕಾನೂನು ವ್ಯವಸ್ಥೆಯಲ್ಲಿ ನಂಬಿಕೆಯಿರಿಸಿದ, ಜನಪರ ಹಕ್ಕುಗಳಿಗಾಗಿ ಹೋರಾಡಿದ ಸ್ಟ್ಯಾನ್ ಸ್ವಾಮಿಯಂತಹ ಸಾಮಾಜಿಕ ಕಾರ್ಯಕರ್ತರನ್ನು ಯ.ಎ.ಪಿ.ಎ. ಕಾಯ್ದೆಯಡಿ ಬಂಧಿಸಿ ದೇಶದ್ರೋಹಿಗಳಂತೆ ಬಿಂಬಿಸಿ ಜೈಲಿನಲ್ಲೇ ಸಾಯುವಂತೆ ಮಾಡಲಾಗುತ್ತಿದೆ. ದೇಶಪ್ರೇಮ , ದೇಶದ್ರೋಹದ ವ್ಯಾಖ್ಯಾನಗಳು ಸಂಪೂರ್ಣ ಬುಡಮೇಲಾಗಿರುವ ದೇಶದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯು ಅರ್ಥಹೀನವೇ ಸರಿ.
” ಯಾರಿಗೆ ಬಂತು ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ? ….ಬಡವರ ಮನೆಗೆ ಬರಲಿಲ್ಲ….ಸಮತೆಯ ಹೂವನು ಅರಲಿಸಲಿಲ್ಲ…” . ವರ್ಷಗಳ ಹಿಂದೆ ಕವಿ ಸಿಧ್ಧಲಿಂಗಯ್ಯ ಬರೆದ ಹಾಡು ಮತ್ತಷ್ಟು ತೀವ್ರ ಸ್ವರೂಪವನ್ನು ಪಡೆಯಬೇಕಾದ ಅನಿವಾರ್ಯತೆ ದೇಶದ ಮುಂದಿದೆ. ಹೌದು, ಆದಾನಿ , ಅಂಬಾನಿಗಳಂತಹ ಕಾರ್ಪೊರೇಟ್ ಕುಳಗಳಿಗೆ ಧಕ್ಕಿರುವ ಅಭಿವೃದ್ಧಿ ಯೋಜನೆಗಳು ಬಡವರ ಪಾಲಿಗೆ ಗಗನಕುಸುಮವಾಗಿಯೇ ಉಳಿದಿವೆ. ನೂತನ ಕೃಷಿ ಕಾಯ್ದೆಗಳ ರದ್ದತಿಗಾಗಿ ಕಳೆದ 8 ತಿಂಗಳುಗಳಿಂದ ಧರಣಿ ಕುಳಿತಿರುವ ಅನ್ನದಾತರ ಅಹವಾಲು ಆಡಳಿತ ವರ್ಗದ ಕಿವಿಗೆ ಬೀಳದಿರುವಾಗ… ಇನ್ಯಾರಿಗಾಗಿ ಈ ಸ್ವಾತಂತ್ರ್ಯೋತ್ಸವದ ಅಬ್ಬರ?
ಸದ್ಯ ಸಿ.ಎ.ಎ., ಎನ್.ಆರ್.ಸಿ. ಮೂಲಕ ದೇಶದ ಮೂಲನಿವಾಸಿಗಳ ಅಸ್ತಿತ್ವವನ್ನೇ ಪ್ರಶ್ನಿಸುವ ಮುಖಾಂತರ ಪ್ರಜಾಪ್ರಭುತ್ವದ ಸಿದ್ಧಾಂತಗಳನ್ನು ನುಚ್ಚುನೂರು ಮಾಡುವುದು ನಿಚ್ಚಳವಾಗಿದೆ. ಮುಸ್ಲಿಮರನ್ನು ಆರ್ಥಿಕವಾಗಿ ಶೋಷಿಸುವ , ರಾಜಕೀಯವಾಗಿ ದಮನಿಸುವ , ಸಾಮಾಜಿಕವಾಗಿ ಸದ್ದಡಗಿಸುವ ಷಡ್ಯಂತ್ರಗಳು ನಡೆಯುತ್ತಲೇ ಇವೆ. ಜಾತ್ಯತೀತತೆ , ಭಾವೈಕ್ಯತೆ , ಸಮಾನತೆ ಕೇವಲ ಭಾಷಣಗಳಲ್ಲಿ ಅಧಿಕಾರದ ಅಸ್ತ್ರವಾಗಿ ಪ್ರಚಲಿತದಲ್ಲಿದೆ. ಕ್ರಿಯಾರೂಪದಲ್ಲಿ ಬರೀ ಅಸಮಾನತೆ , ಕೋಮುವಾದ , ಸರ್ವಾಧಿಕಾರ ದೇಶದಲ್ಲಿ ಚಾಲ್ತಿಯಲ್ಲಿದೆ. ಮುಸ್ಲಿಮರ ಆಹಾರ ಪದ್ಧತಿ , ವಸ್ತ್ರಧಾರಣೆ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ನಡೆಸಿ , ನಿರಂತರ ಶೋಷಣೆಗೊಳಪಡಿಸುವ ಮೂಲಕ ಭೀತಿ ಹುಟ್ಟಿಸಿ ಯಾವ ರಂಗದಲ್ಲೂ ಮುನ್ನೆಲೆಗೆ ಬಾರದಂತೆ ತಡೆಹಿಡಿಯುವ ಪ್ರಯತ್ನಗಳಾಗುತ್ತಿದೆ.
ಸಮುದಾಯದ ನವ ತಲೆಮಾರುಗಳು ಈ ಫ್ಯಾಶಿಸ್ಟರ ಕಪಿಮುಷ್ಟಿಯಲ್ಲಿ ಬಂಧಿತರಾಗದೆ ಸಹೋದರತೆ ಸಮಾನತೆಯ ಬದುಕು ಸಾಗಿಸಲು , ಇನ್ನೂ ಸಂಪೂರ್ಣವಾಗಿ ದಕ್ಕಿಲ್ಲದ ಸ್ವಾತಂತ್ರ್ಯದ ಹಕ್ಕನ್ನು ಮರಳಿ ಪಡೆಯಲು ಕಟಿಬದ್ಧರಾಗಬೇಕಿದೆ. ಕೋಮು ಸಾಮರಸ್ಯ, ನ್ಯಾಯ ಪರಿಪಾಲನೆ , ಸಂವಿಧಾನದ ನೆಲೆಗಟ್ಟಿನಲ್ಲಿ ಆಡಳಿತ ವ್ಯವಸ್ಥೆಯೊಂದು ಹುಟ್ಟಿ ಬಂದಾಗ ಮಾತ್ರವೇ ‘ಸ್ವಾತಂತ್ರ್ಯ’ ದ ನೈಜ ವ್ಯಾಖ್ಯಾನ ರೂಪುಗೊಳ್ಳಬಹುದು.