ಪಾದ್ರಿ ಸ್ಟ್ಯಾನ್ ಸ್ವಾಮಿ ಅವರಿಗೆ ಶ್ರದ್ಧಾಂಜಲಿ, ಮೌನ ಪ್ರತಿಭಟನೆ

Prasthutha|

ಬೆಂಗಳೂರು, ಜು.13: ಬುಡಕಟ್ಟು ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಸಾವಿನ ಹಿನ್ನೆಲೆಯಲ್ಲಿ ಜನತಾಪಕ್ಷದ ಕಾರ್ಯಕರ್ತರು ಶೇಷಾದ್ರಿಪುರಂ ವೃತ್ತದ ಬಳಿ ಮೊಂಬತ್ತಿ ಬೆಳಗುವುದರ ಮೂಲಕ ಶ್ರದ್ದಾಂಜಲಿ ಅರ್ಪಿಸಿ, ಮೌನ ಪ್ರತಿಭಟನೆ ನಡೆದರು.
ಆದಿವಾಸಿ ಹಕ್ಕುಗಳಿಗಾಗಿ, ಬುಡಕಟ್ಟು ಜನಾಂಗದ ಏಳಿಗೆಗಾಗಿ ಹಾಗೂ ಮಾನವ ಹಕ್ಕುಗಳ ಹೋರಾಟಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ಪಾದ್ರಿ ಸ್ಟ್ಯಾನ್ ಸ್ವಾಮಿಯವರನ್ನು ಬೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಕೇಂದ್ರ ಸರ್ಕಾರ ಎನ್ಎಐ ರಾಷ್ಟ್ರೀಯ ತನಿಖಾ ಸಂಸ್ಥೆ ಮುಖಾಂತರ ಬಂಧಿಸಿ ಹಿಂಸೆ ನೀಡಲಾಗಿತ್ತು ಎಂದು ಆರೋಪಿಸಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

- Advertisement -


ಕಾಡುಗಳಲ್ಲಿ ಬುಡಕಟ್ಟು ಜನರಿಗೆ ಸಿಗಬಹುದಾದ ನ್ಯಾಯೋಜಿತ ಹಕ್ಕುಗಳ ಕುರಿತು ಮಾತನಾಡಿದ್ದೇ, ದೇಶದ್ರೋಹ ಎಂದು ಪರಿಗಣಿಸಿ ಪಾದ್ರಿ ಸ್ಟ್ಯಾನ್ ಸ್ವಾಮಿಯವರನ್ನು ಬಂಧಿಸಿದ್ದು ಬಹುದೊಡ್ಡ ದುರಂತವಾಗಿದೆ. ಈ ರೀತಿ ಸಾವಿರಾರು ಹೋರಾಟಗಾರರನ್ನು ಯುಎಪಿಎ ಕಾಯ್ದೆ ಅಡಿ ಬಂಧಿಸಿ ಚಿತ್ರಹಿಂಸೆ ನೀಡುತ್ತಿರುವುದು ಸರಿಯಲ್ಲ. ಇಂತಹ ಕಠೋರ ಹಾಗೂ ಕ್ರೂರ ಕಾಯ್ದೆ ರದ್ದುಮಾಡಬೇಕೆಂದು ಆಗ್ರಹಿಸಿದ ಮಾಜಿ ಸಚಿವೆ ಹಾಗೂ ಸಾಮಾಜಿಕ ಹೋರಾಟಗಾರರಾದ ಡಾ. ಬಿ.ಟಿ. ಲಲಿತಾನಾಯಕ್ , ಯುಎಪಿಎ ಕಾಯ್ದೆಯನ್ನು ಹಿಂದೆಗೆದುಕೊಳ್ಳದಿದ್ದರೆ ಜನತಾ ಪಕ್ಷದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

84 ವರ್ಷದ ವಯೋವೃದ್ಧ ಪಾದ್ರಿ ಸ್ವಾಮಿ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹತ್ಯೆಗಾಗಿ ರೂಪಿಸಿದ ಸಂಚಿನಲ್ಲಿ ಇವರು ಭಾಗಿ ಎಂದು ಸುಳ್ಳು ಕೇಸಿನಲ್ಲಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ಈ ವೇಳೆ ಅವರಿಗೆ ಚಿತ್ರ ಹಿಂಸೆ ನೀಡಿ, ವೈದ್ಯಕೀಯ ಚಿಕಿತ್ಸೆ ನೀಡದೆ ಸಾವನ್ನಪ್ಪುವ ರೀತಿಯಲ್ಲಿ ನಡೆದುಕೊಂಡಿರುವುದು ಅತ್ಯಂತ ದುರಂತದ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಕಗ್ಗೊಲೆ ಎಂದು ಜನತಾ ಪಕ್ಷದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಸ್ಥಾವರಮಠ ಆರೋಪಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡ ಅಬ್ದುಲ್ ಬಶೀರ್, ಕಾರ್ಯಾಧ್ಯಕ್ಷರಾದ ಶಂಕರ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷರಾದ ನಂದೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ವೀರೇಶ್, ಬೆಂಗಳೂರು ನಗರಾಧ್ಯಕ್ಷರಾದ ಎನ್. ನಾಗೇಶ್, ರಾಜ್ಯ ಸಂಯೋಜಕರು, ಸದಸ್ಯತ್ವ ಅಭಿಯಾನ ಎನ್. ಅಭಿಷೇಕ್ ಮತ್ತಿತರರು ಭಾಗವಹಿಸಿದ್ದರು.

Join Whatsapp