►ಮುಂಜಾಗ್ರತಾ ಕ್ರಮವಿಲ್ಲದೆ ಸ್ಪರ್ಧೆ ಆಯೋಜಿಸಿದ್ದರು ಎಂದು ಆಕ್ರೋಶಗೊಂಡ ತಂದೆ
ಮೈಸೂರು: ಕಿಕ್ ಬಾಕ್ಸಿಂಗ್ನಲ್ಲಿ ನನ್ನ ಮಗನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ನಿನ್ನೆ ಮೈಸೂರಿನಲ್ಲಿ ಮೃತಪಟ್ಟ ಕಿಕ್ ಬಾಕ್ಸರ್ ನಿಖಿಲ್ ಅವರ ತಂದೆ ಸುರೇಶ್ ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಸಂಬಂಧ ಗುರುವಾರ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, ನನ್ನ ಮಗ ಕಿಕ್ ಬಾಕ್ಸಿಂಗ್ ಸ್ಪರ್ಧೆ ಇದೆ ಎಂದು ಶನಿವಾರ ಮತ್ತು ರವಿವಾರ ಬೆಂಗಳೂರಿಗೆ ಹೋಗಿದ್ದ, ಅವನನ್ನು ಕರೆದುಕೊಂಡು ಹೋದವರು ಅವನ ಜೊತೆ ಇರಲಿಲ್ಲ.
ಕೇವಲ ನನ್ನ ಮಗ ಮತ್ತು ಇತರ ಸ್ಪರ್ಧಿಗಳು ಹೋಗಿದ್ದು, ರವಿವಾರ ಕಿಕ್ ಬಾಕ್ಸಿಂಗ್ ಸ್ಪರ್ಧೆ ವೇಳೆ ತಲೆಗೆ ಪೆಟ್ಟು ಬಿದ್ದು ನನ್ನ ಮಗ ಆಸ್ಪತ್ರೆ ಸೇರಿದ್ದಾನೆ. ಈ ಬಗ್ಗೆ ಅಯೋಜಕರನ್ನು ಕೇಳಿದಾಗ ಅವರು ಸರಿಯಾದ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.
ಕಿಕ್ ಬಾಕ್ಸಿಂಗ್ ಸ್ಪರ್ಧೆಯ ಆಯೋಜಕರಿಗೆ ಸ್ಪರ್ಧೆಯ ಬಗ್ಗೆ ಯಾವುದೇ ಜ್ಞಾನ ಇಲ್ಲ, ಸ್ಪರ್ಧೆ ನಡೆಯುವ ಜಾಗದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ, ಒಂದೇ ಪಂಚಿಗೆ ಹೇಗೆ ನನ್ನ ಮಗ ಸತ್ತಿದ್ದಾನೆ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು, ಯಾವುದೇ ಜ್ಞಾನವಿಲ್ಲದ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ