ಬೆಳೆ ಹಾನಿಯಾದ ರೈತರಿಗೆ ಕೃಷಿ ಇಲಾಖೆ ತಕ್ಷಣ ಸ್ಪಂದಿಸಿ ಪರಿಹಾರ ನೀಡಬೇಕು: ಅಪ್ಸರ್ ಕೊಡ್ಲಿಪೇಟೆ ಆಗ್ರಹ

Prasthutha|

ಹಾವೇರಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾವೇರಿ ಜಿಲ್ಲೆಯ ಹಸಿವು ಮತ್ತು ಭಯ ಮುಕ್ತ ಚಳುವಳಿಯಾಗಿರುವ ಎಸ್ ಡಿ ಪಿ ಐ  ಪಕ್ಷದ 2024-27 ಅವಧಿಗೆ ನಡೆದ ಆಂತರಿಕ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಬ್ರಾಂಚ್ ಪದಾಧಿಕಾರಿಗಳು ಮತ್ತು ವಿಧಾನಸಭೆಯ  ನಾಯಕರುಗಳ ಸಭೆ ಹಿರೇಕೆರೂರ ಪಟ್ಟಣದಲ್ಲಿ ಜಿಲ್ಲಾಧ್ಯಕ್ಷರಾದ ಖಾಸಿಮ್ ರಬ್ಬಾನಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. 

- Advertisement -

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಖಾಸಿಂ ರಬ್ಬಾನಿ, ಈ ದೇಶದಲ್ಲಿ ಎಸ್ಡಿಪಿಐ ಪಕ್ಷದ ಹೊರತು ಅಲ್ಪಸಂಖ್ಯಾತರ ದಲಿತರ ಹಿಂದುಳಿದ ವರ್ಗಗಳ ಸಮಸ್ಯೆಗಳ ಬಗ್ಗೆ ಮಾತನಾಡುವ ಯಾವುದೇ ಪಕ್ಷವಿಲ್ಲ ಈಗ ಪರ್ಯಾಯ ಪಕ್ಷವಾಗಿ ಬೆಳೆದಿರುವ ಎಸ್ಡಿಪಿಐ ಪಕ್ಷ ಮುಂದಿನ ದಿನಗಳಲ್ಲಿ ವಿರೋಧಪಕ್ಷವಾಗಿ ಬೆಳೆಯುವುದರಲ್ಲಿ ಯಾವದೇ ಸಂದೇಹವಿಲ್ಲ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಪ್ರಧಾನಕಾರ್ಯದರ್ಶಿಯಾದ  ಅಫ್ಸರ್ ಕೊಡ್ಲಿಪೇಟೆ ರವರು   ಪ್ರಸ್ತುತ ಸನ್ನಿವೇಶದಲ್ಲಿ ಪರ್ಯಾಯ ರಾಜಕಾರಣದ (Alternative politics) ಅಗತ್ಯತೆ ಮತ್ತು  ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಕ್ಸುದ್ ಮಕಾಂದಾರ್ ಪರಿಣಾಮಕಾರಿ ನಾಯಕತ್ವದ ಬಗ್ಗೆ ತರಗತಿಗಳನ್ನು ನೀಡಿದರು.

- Advertisement -

ಈ ಸಂಧರ್ಭದಲ್ಲಿ ನಾಯಕರುಗಳನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ  ಅಫ್ಸರ್ ಕೊಡ್ಲಿಪೇಟೆ ರವರು ನೂತನವಾಗಿ ಆಯ್ಕೆಯಾಗಿರುವ ನಾಯಕರುಗಳು ಸ್ಥಳೀಯ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಹೋರಾಟ ಮಾಡುವ ಮೂಲಕ ಅವರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಬೇಕುಎಂದು ಕಿವಿಮಾತು ಹೇಳಿದರು.

ಮುಂದುವರಿದು ಮಾತನಾಡಿದ ಅವರು ಉತ್ತರ ಕರ್ನಾಟಕದ ಹೆಬ್ಬಾಗಿಲು ಜಿಲ್ಲೆ ಎಂದೂ ಕರೆಯಲ್ಪಡುವ ಹಾವೇರಿ ಜಿಲ್ಲೆ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಹೊಂದಿದೆ. ಶಿಶುವಿನಹಾಳ ಶರೀಫರು, ಕನಕದಾಸರು, ಸರ್ವಜ್ಞ, ಹಂಗಳ ಕುಮಾರ ಶಿವಯೋಗಿಗಳು, ವಾಗೀಶ್ ಪಂಡಿತರು, ಸಾಹಿತಿ ಗಳಗನತರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿ.ಕೆ. ಗೋಕಾಕ್ ಮತ್ತು ಇನ್ನೂ ಅನೇಕ ಮಹಾನ್ ಸಂತರ ಜನ್ಮಸ್ಥಳ ಎಂಬ ಹೆಗ್ಗಳಿಕೆ ಜಿಲ್ಲೆಗಿದೆ.

ಇಂತಹ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಇಲ್ಲಿನ ರೈತರು ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಆದರೆ ಜಮೀನಿನಲ್ಲಿ ಮುಳ್ಳುಸಜ್ಜೆ ಕಸ ಮುಳುವಾಗಿ ಪರಿಣಮಿಸಿದ್ದರಿಂದ ವಿಚಲಿತರಾದ ಕೆಲ ರೈತರು, ಈ ವರ್ಷ ಹತ್ತಿ ಬೆಳೆದಿದ್ದಾರೆ. ಆದರೆ ನಿರಂತರ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ, ಹತ್ತಿ ಬೆಳೆ ಕೂಡ ಹಾಳಾಗಿದೆ.

ಹಿರೇಕೆರೂರು ತಾಲೂಕಿನಲ್ಲಿ ಹತ್ತಿಯನ್ನು ವಾಣಿಜ್ಯ ಬೆಳೆಯನ್ನಾಗಿ ರೈತರು ಬೆಳೆಯುತ್ತಾ ಬಂದಿದ್ದಾರೆ. ಕೃಷಿ ಇಲಾಖೆ ಮೂಲಗಳ ಪ್ರಕಾರ, ತಾಲೂಕಿನಲ್ಲಿಒಟ್ಟಾರೆ 650 ಎಕರೆ ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ.

ತಾಲೂಕಿನಲ್ಲಿ ಕಳೆದ ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಹತ್ತಿ ಬೆಳೆಗೆ ತೇವಾಂಶ ಹೆಚ್ಚಾಗಿ ಬೆಳೆ ಕಂದು ಬಣ್ಣಕ್ಕೆ ತಿರುಗುತ್ತಿರುವುದರಿಂದ ರೈತ ಸಮುದಾಯ ಸಂಕಷ್ಟ ಎದುರಿಸುವಂತಾಗಿದೆ ಸರ್ಕಾರ ಈ ರೈತರ ಸಂಕಷ್ಟ ಕಾಲದಲ್ಲಿ ಸೂಕ್ತ ಪರಿಹಾರ ನೀಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಈ ಸಭೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿಲಾನಿ ಮೇದೂರ, ಜಿಲ್ಲಾ ಉಪ್ಪಾಧ್ಯಕ್ಷ ಜಬಿಉಲ್ಲಾ, ಜಿಲ್ಲಾ ಕಾರ್ಯದರ್ಶಿ ಯಾಸಿರ್ ಇರ್ಷಾದ್, ಜಿಲ್ಲಾ ಕೋಶಾಧಿಕಾರಿ ಇಮ್ರಾನ್ ಉಪಸ್ಥಿತರಿದ್ದರು.



Join Whatsapp