ನವದೆಹಲಿ : ಬಿಜೆಪಿ ಸರಕಾರದ ಕೃಷಿ ಕಾನೂನನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು 70ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆ ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ. ಸರಕಾರದ ಜೊತೆಗಿನ ಹನ್ನೊಂದನೇ ಸುತ್ತಿನ ಮಾತುಕತೆಯೂ ವಿಫಲವಾಗಿರುವ ಹಿನ್ನೆಲೆಯಲ್ಲಿ ಶನಿವಾರ ದೇಶಾದ್ಯಂತ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವಂತೆ ರೈತ ಮುಖಂಡರು ಕರೆ ನೀಡಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದ ಸಂಜೆ ಮೂರು ಗಂಟೆ ವರೆಗೆ ಅಂದರೆ 3 ಗಂಟೆಗಳ ಕಾಲ ರಸ್ತೆ ತಡೆ ನಡೆಸುವಂತೆ ದೇಶವ್ಯಾಪಿ ರೈತರಿಗೆ ಕರೆ ನೀಡಲಾಗಿದೆ.
ರೈತರು ಪ್ರತಿಭಟನೆ ನಡೆಸುತ್ತಿರುವ ಗಡಿಗಳಲ್ಲಿ ಇಂಟರ್ ನೆಟ್ ಸ್ಥಗಿತ, ಹೋರಾಟಗಾರರಿಗೆ ಕಿರುಕುಳ, ಪ್ರತಿಭಟನಾ ಸ್ಥಳಗಳ ವಿದ್ಯುತ್ ಮತ್ತು ನೀರು ಸರಬರಾಜನ್ನು ನಿಲ್ಲಿಸುವುದು ಸೇರಿದಂತೆ ಹಲವು ವಿಚಾರಗಳನ್ನು ವಿರೋಧಿಸಿ ಸರಕಾರದ ವಿರುದ್ಧ ಪ್ರತಿಭಟಿಸಲು ರೈತರು ಕರೆ ನೀಡಿದ್ದಾರೆ.