ನವದೆಹಲಿ : ಸಿಂಘು ಗಡಿಯಲ್ಲಿ ವರದಿ ಮಾಡುತ್ತಿದ್ದಾಗ, ಹವ್ಯಾಸಿ ಪತ್ರಕರ್ತ ಮನ್ ದೀಪ್ ಪುನಿಯಾರನ್ನು ಬಂಧಿಸಿರುವುದಕ್ಕೆ ಭಾರತೀಯ ಸಂಪಾದಕರ ಒಕ್ಕೂಟ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಇಂದು ಒಕ್ಕೂಟ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ.
ಸುಳ್ಳು ಸುದ್ದಿಗಳ ಬಗ್ಗೆ ಪರಿಶೀಲನೆ ನಡೆಸಿ, ಸತ್ಯವನ್ನು ಜಗತ್ತಿಗೆ ತೆರೆದಿಡುವ ಸ್ವತಂತ್ರ ಪತ್ರಕರ್ತರಾದ ಪುನಿಯಾರ ಬಂಧನ ಧೈರ್ಯಶಾಲಿ ಯುವ ಧ್ವನಿಗಳನ್ನು ಹತ್ತಿಕ್ಕುವ ಯತ್ನವಾಗಿದೆ ಎಂದು ಒಕ್ಕೂಟ ಅಭಿಪ್ರಾಯ ಪಟ್ಟಿದೆ.
ತಕ್ಷಣವೇ ಪುನಿಯಾರನ್ನು ಬಿಡುಗಡೆಗೊಳಿಸುವಂತೆ ಒಕ್ಕೂಟ ಒತ್ತಾಯಿಸಿದೆ. ಆ ಮೂಲಕ ಭಯ ಅಥವಾ ಪಕ್ಷಪಾತ ರಹಿತ ವರದಿ ಮಾಡುವುದಕ್ಕೆ ಅನುವು ಮಾಡಿಕೊಡುವಂತೆ ದೆಹಲಿ ಪೊಲೀಸರನ್ನು ಅದು ಒತ್ತಾಯಿಸಿದೆ.
ರೈತರ ಪ್ರತಿಭಟನೆಯ ವರದಿ ಮಾಡುತ್ತಿದ್ದ ಪುನಿಯಾರನ್ನು ಸಿಂಘು ಗಡಿಯಲ್ಲಿ ಪೊಲೀಸರು ಬಂಧಿಸಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮತ್ತು ಅವರ ಮೇಲೆ ಹಲ್ಲೆ ಮಾಡಲಾದ ಆರೋಪವನ್ನು ಪುನಿಯಾ ವಿರುದ್ಧ ದಾಖಲಿಸಲಾಗಿದೆ.