ನವದೆಹಲಿ : ನೂತನ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ 65 ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಸರಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ರೈತರು ಪ್ರತಿಭಟನೆ ಕುಳಿತಿರುವ ದೆಹಲಿ ಗಡಿ ಪ್ರದೇಶಗಳಾದ ಸಿಂಘು, ಗಾಝಿಪುರ ಮತ್ತು ಟಿಕ್ರಿಯಲ್ಲಿ ಎರಡು ದಿನಗಳ ಕಾಲ ಇಂಟರ್ನೆಟ್ ಬಂದ್ ಮಾಡಲಾಗಿದೆ.
ಈ ಕುರಿತು ಇಂದು ಮಧ್ಯಾಹ್ನ ಕೇಂದ್ರ ಗೃಹ ಸಚಿವಾಲಯ ಸುತ್ತೋಲೆಯೊಂದನ್ನು ಜಾರಿಗೊಳಿಸಿದೆ. “ಸಿಂಘು, ಗಾಝಿಪುರ, ಟಿಕ್ರಿ ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ.29 ರಾತ್ರಿ 11 ಗಂಟೆಯಿಂದ ಜ.31 ರಾತ್ರಿ ವರೆಗೆ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸುವುದು ಅನಿವಾರ್ಯವಾಗಿದೆ” ಎಂದು ಸಚಿವಾಲಯದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹರ್ಯಾಣ ಸರಕಾರ ಈಗಾಗಲೇ 17 ಜಿಲ್ಲೆಗಳಲ್ಲಿ ಇಂದು ಸಂಜೆ 5 ಗಂಟೆ ವರೆಗೆ ಇಂಟರ್ನೆಟ್ ಸೇವೆ ತಡೆ ಹಿಡಿದಿದೆ. ಇಂದು ಸಂಜೆ ಇದು ವಿಸ್ತರಣೆಯಾಗುವ ಸಾಧ್ಯತೆಯೂ ಇದೆ.
ದೆಹಲಿ ಗಡಿ ಪ್ರದೇಶಗಳಲ್ಲಿ ಲಕ್ಷಾಂತರ ರೈತರು ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.