ರೈತ ಕ್ರಾಂತಿಯ ಹೊಸ ಅಲೆ | ಉ.ಪ್ರ. ಕಿಸಾನ್‌ ಮಹಾ ಪಂಚಾಯತ್‌ ನಲ್ಲಿ ಭುಗಿಲೆದ್ದ ಆಕ್ರೋಶ; ದೆಹಲಿಯತ್ತ ಅಸಂಖ್ಯಾತ ಅನ್ನದಾತರ ನಡಿಗೆ

Prasthutha|

ನವದೆಹಲಿ : ಗಣರಾಜ್ಯೋತ್ಸವ ಟ್ರ್ಯಾಕ್ಟರ್‌ ಪರೇಡ್‌ ವೇಳೆ ನಡೆದ ಅಹಿತಕರ ಬೆಳವಣಿಗೆಗಳು ದೇಶದ ರೈತರನ್ನು ಭಾವನಾತ್ಮಕವಾಗಿ ಬಡಿದ್ದೆಬಿಸಿದೆ. ರೈತ ಹೋರಾಟ ಹೊಸ ತಿರುವು ಪಡೆಯುತ್ತಿದ್ದು, ಶುಕ್ರವಾರ ಉತ್ತರ ಪ್ರದೇಶದ ಮುಝಫ್ಪರ್‌ ನಗರದಲ್ಲಿ ನಡೆದ ಕಿಸಾನ್‌ ಮಹಾಪಂಚಾಯತ್‌ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ನೆರೆದು ಒಕ್ಕೊರಲಿನಿಂದ ರೈತ ಹೋರಾಟಕ್ಕೆ ದನಿಗೂಡಿಸಿದ್ದಾರೆ.

- Advertisement -

ಗುರುವಾರ ರಾತ್ರಿ ದೆಹಲಿ ಗಡಿಯಲ್ಲಿ ರೈತರನ್ನು ಒಕ್ಕೊಲೆಬ್ಬಿಸುವ ಪ್ರಯತ್ನ ನಡೆದ ಹಿನ್ನೆಲೆಯಲ್ಲಿ ರೈತ ಮುಖಂಡ, ಭಾರತೀಯ ಕಿಸಾನ್‌ ಯೂನಿಯನ್‌ ನ ರಾಕೇಶ್‌ ಸಿಂಗ್‌ ಟಿಕಾಯತ್‌ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ಭಾವುಕರಾಗಿ ಮಾತನಾಡಿದ್ದ ರಾಕೇಶ್‌ ಸಿಂಗ್‌ ಅವರ ನೋವು ಜಾಟ್‌ ನೆಲದ ರೈತರ ಮನಸ್ಸನ್ನು ತಟ್ಟಿತ್ತು. ಈ ಹಿನ್ನೆಲೆಯಲ್ಲಿ ತೀವ್ರವಾಗಿ ಸ್ಪಂದಿಸಿದ ಉತ್ತರ ಪ್ರದೇಶದ ರೈತರು ಗಾಜಿಪುರದ ರೈತ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ಪಂಜಾಬ್ ನ ಸಿಖ್ಖರೊಂದಿಗೆ ಉತ್ತರ ಪ್ರದೇಶದ ಜಾಟ್ ಸಮುದಾಯದ ರೈತರೂ ಧ್ವನಿಗೂಡಿಸಲು ಮುಂದಾಗಿದ್ದಾರೆ.

ಇಂಟರ್‌ ಕಾಲೇಜ್‌ ಮೈದಾನದಲ್ಲಿ ನಡೆದ ಮಹಾ ಪಂಚಾಯತ್‌ ನಲ್ಲಿ ಟ್ರ್ಯಾಕ್ಟರ್‌ ನಲ್ಲಿ ತಲುಪಿದ ರೈತರ ಸಂಖ್ಯೆ ಮಧ್ಯಾಹ್ನದ ಹೊತ್ತಿಗೆ ಹೆಚ್ಚಿತು. ರಾಷ್ಟ್ರೀಯ ಲೋಕ ದಳದ ನಾಯಕ ಜಯಂತ್‌ ಚೌಧರಿ ಕೂಡ ಸಭೆಗೆ ಅಗಮಿಸಿದ್ದು, ಪಂಚಾಯತ್‌ ಸಮಾವೇಶದ ಹುರುಪು ಹೆಚ್ಚಿಸಿತು. 100ಕ್ಕೂ ಹೆಚ್ಚು ರೈತ ಮುಖಂಡರು ಪಂಚಾಯತ್‌ ಸಭೆಯಲ್ಲಿ ಪಾಲ್ಗೊಂಡರು.

- Advertisement -

ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ನಾಯಕರು, 2022ರ ಮತ್ತು 2024 ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ನೀಡಿದರು. ಭಾರತ್‌ ಕಿಸಾನ್‌ ಯೂನಿಯನ್‌ ನ ನಾಯಕ ಚಂದರ್‌ ಬೀರ್‌ ಫೌಜಿ, ರಾಕೇಶ್ ಟಿಕಾಯತ್‌ ಸಿಂಗ್‌ ಅವರು ಹಾಕಿದ ಒಂದೊಂದು ಹನಿ ಕಣ್ಣೀರಿಗೆ ಸರ್ಕಾರದಿಂದ ಲೆಕ್ಕ ಪಡೆಯುತ್ತೇವೆ ಎಂದು ಭಾವುಕವಾಗಿ ನುಡಿದರು.

ಗಾಝಿಪುರದ ಒಬ್ಬೇ ಒಬ್ಬ ರೈತನ ಮೇಲೆ ಸಣ್ಣ ಗಾಯವೊಂದಾದರು ನಾವು ಸುಮ್ಮನಿರುವುದಿಲ್ಲ ಎಂದು ರೈತ ನಾಯಕರು ಎಚ್ಚರಿಕೆ ನೀಡಿದರು.

ಭಾರತೀಯ ಕಿಸಾನ್‌ ಯೂನಿಯನ್‌ ಜೊತೆಗೆ ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳ, ಕಾಂಗ್ರೆಸ್‌ ಪಕ್ಷಗಳು ಬೆಂಬಲ ಸೂಚಿಸಿದವು.

ಟ್ರ್ಯಾಕ್ಟರ್‌ ಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪಶ್ಚಿಮ ಮುಜಫ್ಫರ್‌ ನಗರದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಯಿತು. ಬಹುತೇಕ ಕಡೆಗಳಲ್ಲಿ ಅಂಗಡಿಮುಂಗಟ್ಟುಗಳನ್ನು ಮುಚ್ಚಲಾಗಿದೆ.

Join Whatsapp