ನವದೆಹಲಿ : ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ, ಇಂದು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಟ್ರಾಕ್ಟರ್ ಪರೇಡ್ ಹಮ್ಮಿಕೊಳ್ಳಲಾಗಿತ್ತು. ದೆಹಲಿ ಗಡಿ ಪ್ರದೇಶಗಳಲ್ಲಿ ಅಸಂಖ್ಯಾತ ರೈತರು ಗಡಿ ದಾಟಲು ಮುಂದಾಗಿದ್ದು, ಕೆಲವೆಡೆ ಪೊಲೀಸರನ್ನು ಲೆಕ್ಕಿಸದೆ ಈಗಾಗಲೇ ಬ್ಯಾರಿಕೇಡ್ ದೂಡಿ ಪ್ರತಿಭಟನಕಾರರು ಮುನ್ನುಗ್ಗಿದ್ದಾರೆ. ಈ ನಡುವೆ ಕೆಲವೆಡೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ನಡೆದಿದ್ದು, ಅಶ್ರುವಾಯು ಸಿಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಹರ್ಯಾಣ ಮತ್ತು ದೆಹಲಿ ಗಡಿ ಪ್ರದೇಶವಾದ ಸಿಂಘು ಗಡಿಯಲ್ಲಿ ಹಿಂದೆಂದೂ ಕಂಡರಿಯದಂತಹ ಪ್ರತಿಭಟನೆ ನಡೆದಿದೆ. ರೈತರು ಮತ್ತು ಪೊಲೀಸರ ನಡುವೆ ಭಾರೀ ತಿಕ್ಕಾಟ ನಡೆದಿದೆ ಎನ್ನಲಾಗುತ್ತಿದೆ. ಸಾವಿರಾರು ಜನರು ರಾಷ್ಟ್ರಧ್ವಜ ಹಿಡಿದುಕೊಂಡು, ರಾಜಧಾನಿಯತ್ತ ನಡೆದುಕೊಂಡು ಮತ್ತು ಟ್ರಾಕ್ಟರ್ ಹಾಗೂ ವಾಹನಗಳಲ್ಲಿ ಸಾಗಿ ಬರುತ್ತಿರುವುದು ಕಂಡು ಬರುತ್ತಿದೆ. ಅಕ್ಷರಧಾಮದಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿದ ವೀಡಿಯೊಗಳು ಬಂದಿವೆ.