ನಾಳೆ ಬೆಂಗಳೂರಿನಲ್ಲೂ ರೈತರ ಟ್ರಾಕ್ಟರ್ ಕ್ರಾಂತಿ | ಪ್ರಮುಖ ಐದು ರಸ್ತೆಗಳಲ್ಲೂ ಬೃಹತ್ ವಾಹನ ಜಾಥಾ

Prasthutha|

ಬೆಂಗಳೂರು : ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಕಳೆದ 58 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ನಾಳೆ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ರೈತರು ‘ಟ್ರಾಕ್ಟರ್ ಪರೇಡ್’ಗೆ ಕರೆ ಕೊಟ್ಟಿದ್ದಾರೆ. ಸುಮಾರು 10,000 ಟ್ರಾಕ್ಟರ್ ಸೇರಿದಂತೆ ವಿವಿಧ ವಾಹನಗಳಲ್ಲಿ ಬೆಂಗಳೂರಿನಲ್ಲಿ ರೈತರು ಜಾಥಾ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

- Advertisement -

ರೈತರ ಈ ಹೋರಾಟಕ್ಕೆ ಈಗಾಗಲೇ ನೂರಾರು ಸಂಘಟನೆಗೂ ಬೆಂಬಲ ಘೋಷಿಸಿವೆ. ಬೆಂಗಳೂರಿನಲ್ಲಿ ರೈತ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಹಸಿರು ಗಣ ಪರೇಡ್ ಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.

ಟ್ರಾಕ್ಟರ್, ಕಾರು, ದ್ವಿಚಕ್ರ ವಾಹನಗಳು, ಬಸ್ ಸೇರಿದಂತೆ ವಿವಿಧ ವಾಹನಗಳು ಜಾಥಾದಲ್ಲಿ ಭಾಗಿಯಾಗಲಿವೆ. ನಗರದ ಐದು ಕಡೆಗಳಿಂದ ಏಕಕಾಲದಲ್ಲಿ ಜಾಥಾ ಹೊರಡಲಿದೆ. ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ, ರೈತರ ಟ್ರಾಕ್ಟರ್ ಪರೇಡ್ ಆರಂಭವಾಗಲಿದೆ.

- Advertisement -

ಟ್ರಾಕ್ಟರ್ ಗಳಿಂದ ನಗರದಲ್ಲಿ ಸಂಚಾರಿ ವ್ಯವಸ್ಥೆಗೆ ಅಡಚಣೆಯಾಗುತ್ತದೆ ಎಂದು ಪೊಲೀಸರು ಹೇಳಿರುವುದರಿಂದ ಟ್ರಾಕ್ಟರ್ ಗಳ ಸಂಖ್ಯೆ ಕಡಿಮೆ ಮಾಡಲಾಗುವುದು. ಆದರೆ, ರೈತರನ್ನು ಬೇರೆ ವಾಹನಗಳಲ್ಲಿ ಬರುವಂತೆ ಸೂಚಿಸಲಾಗಿದೆ.

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ ಕಡೆಗಳಿಂದ ಬರುವ ರೈತರು ದೇವನಹಳ್ಳಿ ನಂದಿ ಉಪಾಹಾರ, ನಂದಿ ಕ್ರಾಸ್ ಬಳಿಯಿಂದ ಜಾಥಾ ಆರಂಭಿಸಲಿದ್ದಾರೆ.

ಕೋಲಾರ, ಮುಳಬಾಗಿಲು ಕಡೆಯಿಂದ ಬರುವ ರೈತರು ಹೊಸಕೋಟೆ ಟೋಲ್ ಜಂಕ್ಷನ್ ಬಳಿ ನೆರೆದು, ಅಲ್ಲಿಂದ ಜಾಥಾ ಹೊರಡಲಿದ್ದಾರೆ.

ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಕಡೆಯಿಂದ ಬರುವ ರೈತರು ಬಿಡದಿ ಇಂಡಸ್ಟ್ರಿಯಲ್ ಜಂಕ್ಷನ್, ಬೈರಮಂಗಲ ಕ್ರಾಸ್ ಬಳಿ ಒಟ್ಟು ಸೇರಿ, ಅಲ್ಲಿಂದ ವಾಹನ ಮೆರವಣಿಗೆ ನಡೆಸಲಿದ್ದಾರೆ.

ರೈಲುಗಳ ಮೂಲಕ ಬರುವವರು ಮತ್ತು ನಗರ ವ್ಯಾಪ್ತಿಯ ಬೆಂಬಲಿಗರು ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ನಡೆಸಲಿದ್ದಾರೆ.

ಹಾಸನ, ತುಮಕೂರು ಕಡೆಯಿಂದ ಬರುವ ರೈತರು ನೈಸ್ ರೋಡ್ ಜಂಕ್ಷನ್ ನಲ್ಲಿ ಸೇರಿ, ಅಲ್ಲಿಂದ ವಾಹನಜಾಥಾ ಮಾಡಲಿದ್ದಾರೆ. ನೈಸ್ ರೋಡ್ ಜಂಕ್ಷನ್ ನಿಂದ ಪರೇಡ್ ಆರಂಭವಾಗಿ ಗೊರಗುಂಟೆ ಪಾಳ್ಯ, ಯಶವಂತಪುರ, ಮಲ್ಲೇಶ್ವರಂ ಸರ್ಕಲ್ ಮೂಲಕ, ಆನಂದರಾವ್ ಸರ್ಕಲ್ ಗೆ ಬಂದು ಅಲ್ಲಿಂದ, ಫ್ರೀಡಂ ಪಾರ್ಕ್ ವರೆಗೆ ವಾಹನ ಜಾಥಾ ತಲುಪಲಿದೆ.  

Join Whatsapp