ರೈತರ ರಣಕಹಳೆ | ಫ್ರೀಡಂ ಪಾರ್ಕ್ ನಲ್ಲಿ ಸಮಾವೇಶ ಮುಗಿಸಿ ರಾಜಭವನದತ್ತ ರೈತರ ಪಾದಯಾತ್ರೆ; ಬಿಜೆಪಿ ವಿರುದ್ಧ ಕೈ ನಾಯಕರಿಂದ ತೀವ್ರ ವಾಗ್ದಾಳಿ

Prasthutha|

ಬೆಂಗಳೂರು : ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ, ಇಂದು ಕಾಂಗ್ರೆಸ್ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶ ನಡೆದಿದೆ. ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಮಾವೇಶದ ಬಳಿಕ, ಈಗ ಪ್ರತಿಭಟನಕಾರರು ರಾಜಭವನದತ್ತ ಪಾದಯಾತ್ರೆ ಆರಂಭಿಸಿದ್ದಾರೆ.

- Advertisement -

ರೈತರಿಗೆ ಬೆಂಬಲಾರ್ಥವಾಗಿ ನಡೆಯುತ್ತಿರುವ ಈ ಹೋರಾಟ ರಾಜಭವನಕ್ಕೆ ಮುತ್ತಿಗೆ ಹಾಕುವ ಉದ್ದೇಶವನ್ನು ಹೊಂದಿದೆ. ಈ ವೇಳೆ ಪೊಲೀಸರು ನಮ್ಮನ್ನು ಬಂಧಿಸಿದರೂ ಹೋರಾಟ ಮುಂದುವರಿಸಬೇಕು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಪರಮೇಶ್ವರ್ ಮಾತನಾಡಿ, ಯಾವ ರೈತ ಅನ್ನ ಕೊಟ್ಟಿದ್ದಾನೋ ಅವನನ್ನೇ ಬೀದಿಗೆ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ರೈತರಿಗೆ ಸರಿಯಾದ ಬೆಲೆ ಕೊಡದೆ ಮಧ್ಯವರ್ತಿಗಳು ಲೂಟಿ ಮಾಡುತ್ತಿದ್ದಾರೆ. ಸರಕಾರ ಎಪಿಎಂಸಿಯನ್ನು ಮುಚ್ಚಿ ಮಧ್ಯವರ್ತಿಗಳ ಕೈಗೆ ರೈತರನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.

- Advertisement -

ಕಾನೂನನ್ನು ವಾಪಾಸ್ ಪಡೆಯುವವರೆಗೆ ನಾವು ವಿರಮಿಸುವುದಿಲ್ಲ. ಬಂಧಿಸಲಿ, ಜೈಲಿಗೆ ಹಾಕಲಿ, ಆದರೆ ಕಾನೂನು ವಾಪಾಸ್ ಪಡೆಯುವವರೆಗೆ ನಾವು ಹೋರಾಟ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ, ಪರಿಸ್ಥಿತಿ ಏನೇ ಬಂದರೂ ರೈತರ ಪರವಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.

ಈಗ ಪ್ರತಿಭಟನಕಾರರು ಫ್ರೀಡಂ ಪಾರ್ಕ್ ನಿಂದ ರಾಜಭವನದತ್ತ ಮೆರವಣಿಗೆ ಹೊರಟಿದ್ದಾರೆ.    



Join Whatsapp