ಜ.26ರಂದು ಬೆಂಗಳೂರಿನಲ್ಲಿ ನಡೆಯುವ ರೈತರ ಪರೇಡ್ ಗೆ ಕೊಡಗು ಭೂ ಹೋರಾಟಗಾರರ ಬೆಂಬಲ

Prasthutha|

ಮಡಿಕೇರಿ : ಜ.26ರಂದು ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಪರೇಡ್ ನಲ್ಲಿ ಭಾಗವಹಿಸಲು ಕೊಡಗು ಜಿಲ್ಲಾ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಮಿತಿಯ ಅಧ್ಯಕ್ಷ ಅಮೀನ್ ಮೊಹಿಸಿನ್ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ಈ ಕುರಿತ ಸಭೆ ನಡೆಯಿತು.

- Advertisement -

ಈ ವೇಳೆ ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಹಿನ್ನೆಲೆ ಮತ್ತು ಹೋರಾಟಗಾರರ ಬದ್ಧತೆಯನ್ನು ವಿವರಿಸಿದರು. ಅಲ್ಲದೆ, ಬೆಂಗಳೂರಿನಲ್ಲಿ ಜ.26ರಂದು ನಡೆಯಲಿರುವ ಕಾರ್ಯಕ್ರಮದ ಕುರಿತೂ ವಿವರಣೆ ನೀಡಿದರು.

ಕೊಡಗಿನ ಭೂಮಿ ಹೋರಾಟ ನಡೆದು ಬಂದ ಹಾದಿಯ ಕುರಿತು ವಿಮರ್ಶೆ ಮತ್ತು ತಮ್ಮ ಆಶಯಗಳನ್ನು ಮೊಣ್ಣಪ್ಪ, ಮಂಜುನಾಥ್, ಕಾವೇರಿಯವರು ವ್ಯಕ್ತಪಡಿಸಿದರು.

- Advertisement -

ಚೆರಿಯ ಪರಂಬು, ಪಾಲೆಮಾಡು, ಹಳ್ಳಿಗಟ್ಟು, ಕೆರೆತಟ್ಟು, ಬಾಳು ಗೋಡು, ಗದ್ದುಗೆ, ನೆಹರೂ ನಗರದಿಂದ ಬಂದಿದ್ದ ನಿರಾಶ್ರಿತರು ತಮ್ಮ ಸಮಸ್ಯೆಗಳನ್ನು ಸಮಿತಿಯ ಗಮನಕ್ಕೆ ತಂದರು.

ಜಿಲ್ಲಾ ಸಮಿತಿಯು ಹಾಡಿಗಳಿಗೆ ಭೇಟಿ ನೀಡಿ ವಾಸ್ತವವನ್ನು ತಿಳಿದು ಕಾರ್ಯಯೋಜನೆ ರೂಪಿಸಬೇಕೆಂದು ಇದೇ ವೇಳೆ ತೀರ್ಮಾನಿಸಲಾಯಿತು.

ಸೋಮವಾರ ಪತ್ರಿಕಾಗೋಷ್ಠಿ ಕರೆದು, ನೆನೆಗುದಿಗೆ ಬಿದ್ದಿರುವ ಭೂಮಿ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥಗೊಳಿಸಬೇಕು, ಇಲ್ಲವಾದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡುವುದಕ್ಕೆ ನಿರ್ಣಯಿಸಲಾಯಿತು.

ಜ.25ರಂದು ಮಡಿಕೇರಿಯಲ್ಲಿ ಬಡವರ ಪೆರೇಡ್ ನಡೆಸುವ ಬಗ್ಗೆಯೂ ನಿರ್ಧರಿಸಲಾಯಿತು. ಅಂದು ಬೆಳಗ್ಗೆ 11 ಗಂಟೆಗೆ ಗದ್ದುಗೆಯಿಂದ ವಾಹನಗಳಲ್ಲಿ ಮತ್ತು ಕಾಲ್ನಡಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು. ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಅದೇ ದಿನ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸುವುದು ಎಂದು ನಿರ್ಣಯಿಸಲಾಯಿತು.

 ಜ. 26 ರಂದು ಬೆಂಗಳೂರಿನಲ್ಲಿ ನಡೆಯುವ ರೈತರ ಪೆರೇಡ್ ನಲ್ಲಿ ಭಾಗವಹಿಸುವುದು ಮತ್ತು ಜ.28ರಂದು ವಿಧಾನಸಭಾ ಅಧಿವೇಶನ ಪ್ರಾರಂಭವಾಗಲಿರುವುದರಿಂದ ಜ.28 ರ ವರೆಗೆ ಪ್ರತಿಭಟನಾ ಸ್ಥಳದಲ್ಲಿ ಉಳಿದು ತಮ್ಮ ಅಹವಾಲು ಸಲ್ಲಿಸಿ ಅಂದು ವಾಪಾಸ್ ಬರುವುದು ಎಂದೂ ಇದೇ ವೇಳೆ ನಿರ್ಧರಿಸಲಾಯಿತು.

ಬೇಡಿಕೆ ಈಡೇರದಿದ್ದರೆ, ಮಾರ್ಚ್ ತಿಂಗಳಲ್ಲಿ ಕೊಡಗಿನ ನಿರಾಶ್ರಿತರೆಲ್ಲ ಸೇರಿ ಜಿಲ್ಲಾಡಳಿತ ಕಛೇರಿಯ ಮುಂದೆ ಬೇಡಿಕೆಗಳು ಈಡೇರುವವರೆಗೂ ಅನಿರ್ದಿಷ್ಠಾವಧಿ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

Join Whatsapp