ರೈತರ ಹೋರಾಟದಲ್ಲಿ ರೈತರೊಂದಿಗೆ ನಿಂತ ವಾಷಿಂಗ್ ಮೆಷಿನ್ ಗಳು..!

Prasthutha|

ನವದೆಹಲಿ : ದೇಶದ ಐತಿಹಾಸಿಕ ಹೋರಾಟದಲ್ಲಿ ನಿರತರಾಗಿರುವ ರೈತರ ಜೊತೆಗೆ ಇಡೀ ದೇಶವೇ ನಿಂತಿದೆ. ಇಂತಹ ಒಂದು ಹೋರಾಟದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದಾರೆ. ಕಳೆದ 50 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಠಿಕಾಣಿ ಹೂಡಿರುವ ರೈತರ ಬಟ್ಟೆ ಸ್ವಚ್ಛಗೊಳಿಸಲು ಸುಮಾರು 500ಕ್ಕೂ ಹೆಚ್ಚು ವಾಷಿಂಗ್ ಮೆಷಿನ್ ಗಳು ಕಾರ್ಯನಿರ್ವಹಿಸುತ್ತಿವೆ.

- Advertisement -

ಪ್ರತಿಭಟನಾ ಸ್ಥಳದಲ್ಲಿ ಖಾಲ್ಸಾ ಏಡ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ರೈತರು ಮತ್ತು ಬೆಂಬಲಿಗರು ಇಲ್ಲಿ ವಾಷಿಂಗ್ ಮೆಷಿನ್ ಗಳನ್ನು ಹಾಕಿದ್ದಾರೆ. ತಮ್ಮ ಕೈಯಲ್ಲಿ ಆದಷ್ಟು, ತಮ್ಮ ಶಕ್ತಿಗೆ ಮೀರಿದಷ್ಟು ಮೆಷಿನ್ ಗಳನ್ನು ಇಲ್ಲಿಡುವ ಪ್ರಯತ್ನ ಮಾಡಿದ್ದಾರೆ.

ಖಾಲ್ಸಾ ಏಡ್ ಟಿಕ್ರಿ ಗಡಿಯೊಂದರಲ್ಲೇ 10 ಮಸಿನ್ ಗಳು ಬಳಕೆಯಲ್ಲಿವೆ. ಬೇರೆ ಬೇರೆ ಗಡಿಗಳಲ್ಲಿ ಕನಿಷ್ಠ  ಆರು ವಾಷಿಂಗ್  ಮೆಷಿನ್ ಗಳನ್ನು ಇದೊಂದೇ ಸಂಸ್ಥೆ ನೀಡಿದೆ. ಇದೆ ರೀತಿ ಪಂಜಾಬ್ ನಿಂದ ಬಂದ ಇಬ್ಬರು ಯುವಕರ ತಂಡ ಸಿಂಘು ಗಡಿಯ ಆರಂಭದಲ್ಲೇ ಎರಡು ಮೆಷಿನ್ ಗಳ ಮೂಲಕ ರೈತರ ಬಟ್ಟೆ ಒಗೆದು, ಒಣಗಿಸಿ ಕೊಡುವ ಕೆಲಸ ಮಾಡುತ್ತಿದ್ದಾರೆ.

- Advertisement -

ಗುರು ಕಾ ಲಂಗರ್ ಗಳಲ್ಲಿ ಎರಡೆರಡು ವಾಷಿಂಗ್ ಮೆಷಿನ್ ಗಳನ್ನು ಇಟ್ಟಿದ್ದಾರೆ. ಈ ಮೂಲಕ ಲಂಗರ್ ಸೇವೆ ಮತ್ತು ಬಟ್ಟೆ ತೊಳೆದುಕೊಡುವ ಸೇವೆಯನ್ನು ಮಾಡಲಾಗುತ್ತಿದೆ.

ಪಂಜಾಬ್ ನ ಲುದಿಯಾನ ಮೂಲದ ಪ್ರಿನ್ಸ್ ಪಾಲ್ ಸಿಂಗ್ ಎಂಬುವರು ನಾಲ್ಕು ವಾಷಿಂಗ್ ಮೆಷಿನ್ ಗಳನ್ನು ಸಿಂಘು ಗಡಿಯಲ್ಲಿ ಇಟ್ಟಿದ್ದು, ರೈತರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ದೆಹಲಿ ಚಲೋಗೆ ಸಾಥ್ ನೀಡಲು ಬಂದಿದ್ದ ಪ್ರಿನ್ಸ್ ಪಾಲ್ ಸಿಂಗ್ ಕೆಲ ದಿನಗಳು ಇಲ್ಲಿಯೇ ಟೆಂಟ್ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದಾರೆ.

ನಾವು ಇಲ್ಲಿಂದ 350 ಕಿಲೊಮೀಟರ್ ದೂರದಲ್ಲಿರುವ ಲುದಿಯಾನದಿಂದ ಬಂದಿದ್ದೇವೆ. ಮೊದಲು ಇಲ್ಲಿಗೆ ಬಂದು ಟೆಂಟ್ ಹಾಕಿಕೊಂಡಿದ್ದ ಸಂದರ್ಭದಲ್ಲಿ ಬಟ್ಟೆ ಕೊಳೆಯಾಗಿತ್ತು. ಅವುಗಳನ್ನು ವಾಶ್ ಮಾಡಿಸಲು  350 ಕಿ.ಮೀ. ದೂರ ಮತ್ತೆ ಪ್ರಯಾಣಿಸಬೇಕಾಯಿತು. ಸ್ವಂತ ಕಷ್ಟಕ್ಕೆ ಒಳಗಾದ ಮೇಲೆ ನನಗೆ ರೈತರ ಕಷ್ಟ ಅನುಭವಕ್ಕೆ ಬಂತು. ನಾನು ಮತ್ತೆ ಊರಿಗೆ ಹೋಗಿ ಅಲ್ಲಿಂದ ನಾಲ್ಕು ವಾಷಿಂಗ್ ಮೆಷಿನ್ ಗಳನ್ನು ಕೊಂಡು ತಂದು ಇಲ್ಲಿ ಇಟ್ಟಿದ್ದೇನೆʼ ಎಂದು ಅವರು ಹೇಳುತ್ತಾರೆ.

“ಮೊದಲಿಗೆ ನಾನೊಬ್ಬನೇ ಇದ್ದೆ. ಈಗ ಇಲ್ಲಿನ ಸ್ಥಳೀಯ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುವ ಯುವಕರು ಸಹಾಯಕ್ಕೆ ಬಂದಿದ್ದಾರೆ. ಜೊತೆಗೆ ಪ್ರತಿಭಟನೆಯಲ್ಲಿ ಇರುವ ಯುವಕರು ಸಾಥ್ ನೀಡುತ್ತಿದ್ದಾರೆ. ಪಕ್ಕದಲ್ಲಿರುವ ಮನೆ ಮಾಲೀಕ ಬಟ್ಟೆ ಒಗೆಯಲು ಬೇಕಾದ ನೀರು ಮತ್ತು ವಿದ್ಯುತ್ ಶಕ್ತಿ ವ್ಯವಸ್ಥೆಯನ್ನು ಉಚಿತವಾಗಿ ನೀಡಿದ್ದಾರೆ” ಎಂದು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

“ನಮ್ಮಗಳ ಜೊತೆಗೆ ಇಲ್ಲಿ ಹಲವು ಸಂಘಟನೆಗಳು ವಾಷಿಂಗ್ ಮಷಿನ್ ಹಾಕಿಕೊಂಡಿವೆ. ಅವರುಗಳನ್ನು ಹೊರತುಪಡಿಸಿ ನಮಗೆ ಪ್ರತಿದಿನ ಕನಿಷ್ಟ 300 ಜನ ರೈತರು ಬಟ್ಟೆ ನೀಡುತ್ತಾರೆ. ಬಟ್ಟೆ ವಾಶ್ ಮಾಡಿಕೊಡಲು 20 ನಿಮಿಷ ಸಮಯ ಕೇಳುತ್ತೇವೆ. ನಂತರ ಬಂದು ಕಲೆಕ್ಟ್ ಮಾಡಿಕೊಳ್ಳಲು ತಿಳಿಸಲಾಗುತ್ತದೆ. ಇದೊಂದು ಸೇವೆ ಎಂದು ನಾವು ಪರಿಗಣಿಸಿದ್ದೇವೆ. ನಮ್ಮ ರೈತರ ಕಷ್ಟಕ್ಕೆ ನಾವು ನಿಲ್ಲಬೇಕು. ಇದು ದೇಶದ ಎಲ್ಲಾ ರೈತರ ಸಮಸ್ಯೆ ಇದು. ಕೇಂದ್ರ ಸರ್ಕಾರ ಮೂರು ಕಪ್ಪು ಕಾನೂನುಗಳನ್ನು ಪಾವಸ್ ಪಡೆಯುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ನಾನು ಇಲ್ಲಿ ಸೇವೆ ಸಲ್ಲಿಸುತ್ತಲೇ ಇರುತ್ತೇನೆ” ಎಂದಿದ್ದಾರೆ ಪ್ರಿನ್ಸ್ ಪಾಲ್ ಸಿಂಗ್. 

ಇದೇ ರೀತಿ ಹಲವು ವಾಷಿಂಗ್ ಮಷಿನ್ ಟೆಂಟ್ ಗಳನ್ನು ಹಾಕಿರುವ ಜನ ಕೂಡ ಪ್ರತಿಭಟನೆ ಅಂತ್ಯವಾಗುವವರೆಗೂ ನಾವು ಸೇವೆ ಸಲ್ಲಿಸುತ್ತೇವೆ ಎನ್ನುತ್ತಾರೆ.

ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ.



Join Whatsapp