ವಿವಾದಾತ್ಮಕ ಕೃಷಿ ಕಾನೂನುಗಳ ಅಧ್ಯಯನಕ್ಕೆ ಸುಪ್ರೀಂ ಕೋರ್ಟ್ ನೇಮಿಸಿದ ಸದಸ್ಯರೆಲ್ಲಾ ಕಾಯ್ದೆಗಳ ಸಮರ್ಥಕರು! : ವ್ಯಾಪಕ ಆಕ್ರೋಶ

Prasthutha|

ನವದೆಹಲಿ : ಕೇಂದ್ರ ಸರಕಾರದ ನೂತನ ಕೃಷಿ ಮಸೂದೆಗಳಿಗೆ ತಾತ್ಕಾಲಿಕ ತಡೆ ನೀಡಿರುವ ಸುಪ್ರೀಂ ಕೋರ್ಟ್, ಮಸೂದೆ ಪರಿಶೀಲನೆಗೆ ತಜ್ಞರ ಸಮಿತಿಯೊಂದನ್ನು ರಚಿಸಿದೆ. ಆದರೆ, ಕೋರ್ಟ್ ರಚಿಸಿರುವ ಸಮಿತಿಯಲ್ಲಿರುವ ಎಲ್ಲಾ ನಾಲ್ಕು ಮಂದಿ ಸದಸ್ಯರೂ, ಈಗಾಗಲೇ ಕೃಷಿ ಮಸೂದೆ ಪರವಾದ ಅಭಿಪ್ರಾಯ ವ್ಯಕ್ತಪಡಿಸಿದವರು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೊಳಪಟ್ಟಿದೆ.

- Advertisement -

ವಿವಾದಾತ್ಮಕ ಕೃಷಿ ಮಸೂದೆಗಳ ಸಮರ್ಥಕರಾಗಿರುವ ಇವರ ಸಮಿತಿ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿಬಂದಿದೆ.

ಸಮಿತಿಯಲ್ಲಿ ಭೂಪಿಂದರ್ ಸಿಂಗ್ ಮಾನ್, ಡಾ. ಪ್ರಮೋದ್ ಕುಮಾರ್ ಜೋಷಿ, ಅಶೋಕ್ ಗುಲಾಟಿ ಮತ್ತು ಅನಿಲ್ ಘನ್ವತ್ ಇದ್ದು, ಇವರೆಲ್ಲರೂ ಈಗಾಗಲೇ ಕಾಯ್ದೆಗಳ ಪರವಾದ ಅಭಿಪ್ರಾಯ ವ್ಯಕ್ತಪಡಿಸಿದವರಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಆಧಾರವಾಗಿ ಕೃಷಿ ಕಾಯ್ದೆಗಳನ್ನು ಇವರು ಸಮರ್ಥಿಸಿಕೊಂಡಿರುವರೆನ್ನಲಾದ ಹೇಳಿಕೆಗಳು, ಲೇಖನಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.

- Advertisement -

ಕೃಷಿ ಕಾಯ್ದೆಗಳ ಕುರಿತು ಈ ಸಮಿತಿ ಸದಸ್ಯರುಗಳು ಏನೇನು ಹೇಳಿದ್ದಾರೆ ನೋಡಿ…

“ಈ ಶಾಸನಗಳ ಆರ್ಥಿಕ ತಾರ್ಕಿಕತೆಯೆಂದರೆ, ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಖರೀದಿದಾರರಿಗೆ ಖರೀದಿಸಲು ಮತ್ತು ಸಂಗ್ರಹಿಸಲು ಹೆಚ್ಚಿನ ಆಯ್ಕೆ ಮತ್ತು ಸ್ವಾತಂತ್ರ್ಯವನ್ನು ಒದಗಿಸುವುದು. ಇದರಿಂದಾಗಿ ಕೃಷಿ ವ್ಯಾಪಾರೋದ್ಯಮದಲ್ಲಿ ಸ್ಪರ್ಧೆ ಸೃಷ್ಟಿಯಾಗುತ್ತದೆ. ಈ ಸ್ಪರ್ಧೆಯು ಮಾರ್ಕೆಟಿಂಗ್ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ಉತ್ತಮ ಬೆಲೆ ಆವಿಷ್ಕಾರವನ್ನು ಶಕ್ತಿಗೊಳಿಸುವ ಮೂಲಕ, ರೈತರಿಗೆ ಬೆಲೆ ಸಾಕ್ಷಾತ್ಕಾರವನ್ನು ಸುಧಾರಿಸುವ ಮೂಲಕ ಮತ್ತು ಅದೇ ಸಮಯದಲ್ಲಿ ಗ್ರಾಹಕರು ಪಾವತಿಸುವ ಬೆಲೆಯನ್ನು ಕಡಿಮೆ ಮಾಡುವ ಕೃಷಿಯಲ್ಲಿ ಹೆಚ್ಚು ಪರಿಣಾಮಕಾರಿ ಮೌಲ್ಯ ಸರಪಳಿಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ” ಎಂದು ಸಮಿತಿ ಸದಸ್ಯರಲ್ಲಿ ಓರ್ವರಾಗಿರುವ ಅಶೋಕ್ ಗುಲಾಟಿ ‘ದ ಇಂಡಿಯನ್ ಎಕ್ಸ್ ಪ್ರೆಸ್’ಗೆ ಬರೆದಿರುವ ಲೇಖನದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಅದರಲ್ಲಿ ಅವರು ಪ್ರತಿಪಕ್ಷವು ದಾರಿ ತಪ್ಪಿದೆ, ಆದರೆ ಸರಕಾರ ತನ್ನ ಕಾರ್ಯವನ್ನು ಒಟ್ಟುಗೂಡಿಸಬೇಕು ಎಂದು ಪ್ರತಿಪಾದಿಸಿದ್ದಾರೆ.

“ನಿಜವಾದ ಬೇಡಿಕೆಗಳನ್ನು ಪರಿಗಣಿಸುವ ಬಗ್ಗೆ ಕೇಂದ್ರದ ಸಕರಾತ್ಮಕ ಪ್ರತಿಕ್ರಿಯೆಯ ಹೊರತಾಗಿಯೂ ರೈತ ಆಂದೋಲನವನ್ನು ಇನ್ನೂ ಬಗೆಹರಿಸಲಾಗಿಲ್ಲ ಎಂಬುದು ವಿಷಾಧನೀಯ. ಪ್ರತಿ ಮಾತುಕತೆಗೆ ಮುಂಚಿತವಾಗಿ ರೈತರು ತಮ್ಮ ಗೋಲ್ ಪೋಸ್ಟ್ ಗಳನ್ನು ಬದಲಾಯಿಸುತ್ತಿರುವುದು ದುರದೃಷ್ಟಕರ. ಆರಂಭದಲ್ಲಿ ರೈತರು, ರೈತ ಸಂಘಟನೆಗಳನ್ನು ಸಂಪರ್ಕಿಸದೆ ಕಾನೂನುಗಳನ್ನು ರೂಪಿಸಲಾಗಿದೆ ಎಂದು ಹೇಳಲಾಗಿತ್ತು. ಇದು ಅನ್ಯಾಯದ ಹಕ್ಕು, ಕೃಷಿ ಮಾರುಕಟ್ಟೆಗಳನ್ನು ಅನಿಯಂತ್ರಣಗೊಳಿಸುವ ವಿಷಯವು ಚರ್ಚೆಯಲ್ಲಿದೆ ಮತ್ತು ಕಳೆದ ಎರಡು ದಶಕಗಳಿಂದ ಚರ್ಚೆಯಾಗಿದೆ” ಎಂದು ಸಮಿತಿಯ ಇನ್ನೋರ್ವ ಸದಸ್ಯರಾದ ಪ್ರಮೋದ್ ಕುಮಾರ್ ಜೋಶಿ (ಪಿ.ಕೆ. ಜೋಶಿ) ಅವರು ‘ಫೈನಾನ್ಷಿಯಲ್ ಎಕ್ಸ್ ಪ್ರೆಸ್’ಗೆ ಲೇಖನ ಬರೆದಿದ್ದಾರೆ.

ಇನ್ನೋರ್ವ ಸದಸ್ಯ ಭೂಪಿಂದರ್ ಸಿಂಗ್ ಮಾನ್, ಎಐಕೆಸಿಸಿ ಎಂಬ ಒಕ್ಕೂಟದ ಅಧ್ಯಕ್ಷರು. 2020, ಡಿ.14ರಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿದ್ದ ಇವರು ವಿರೋಧಗಳಿಗೆ ತಲೆಬಾಗಬೇಡಿ, ಕಾನೂನುಗಳನ್ನು ಜಾರಿಗೆ ತನ್ನಿ ಎಂದು ಮನವಿ ಪತ್ರ ಸಲ್ಲಿಸಿದ್ದರು.

ಸಮಿತಿಯ ಮತ್ತೋರ್ವ ಸದಸ್ಯರಾದ ಅನಿಲ್ ಘನ್ವತ್ ಮಹಾರಾಷ್ಟ್ರದ ಶೇತ್ಕಾರಿ ಸಂಘಟನೆಯ ಅಧ್ಯಕ್ಷರು. “ಸರ್ಕಾರವು ಕಾನೂನುಗಳ ಅನುಷ್ಠಾನವನ್ನು ನಿಲ್ಲಿಸಿ, ರೈತರೊಂದಿಗೆ ಚರ್ಚಿಸಿದ ನಂತರ ಅವುಗಳನ್ನು ತಿದ್ದುಪಡಿ ಮಾಡಬಹುದು. ಆದರೆ, ರೈತರಿಗೆ ಅವಕಾಶಗಳನ್ನು ತೆರೆದಿರುವ  ಕಾನೂನುಗಳನ್ನು ಹಿಂದೆಗೆದುಕೊಳ್ಳುವ ಅಗತ್ಯವಿಲ್ಲ” ಎಂದು ಅನಿಲ್ ಘನ್ವತ್ ಪ್ರತಿಪಾದಿಸಿದ್ದರು.

ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಯಲ್ಲಿ ನೇಮಕಗೊಂಡಿರುವ ಸದಸ್ಯರ ಈ ಮೇಲಿನ ಅಭಿಪ್ರಾಯಗಳ ಲೇಖನಗಳು, ವರದಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.



Join Whatsapp