ಈ ಬಾರಿ ಕೆಂಪುಕೋಟೆಯಲ್ಲಿ ಮೋದಿ ಧ್ವಜಾರೋಹಣಕ್ಕೆ ಬಿಡುವುದಿಲ್ಲ : ರೈತ ಮುಖಂಡರ ಎಚ್ಚರಿಕೆ

Prasthutha|

ನವದೆಹಲಿ : ಈ ಬಾರಿ ಜ.26ರಂದು ದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿ ಮೋದಿಯವರಿಗೆ ಧ್ವಜಾರೋಹಣ ಮಾಡಲು ಬಿಡುವುದಿಲ್ಲ. ಕೆಂಪುಕೋಟೆಯ ಮೇಲೆ ಈ ಬಾರಿ ರೈತರು ತಮ್ಮ ಧ್ವಜ ಹಾರಿಸಲಿದ್ದಾರೆ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ ಎಂದು ‘ನಾನುಗೌರಿ.ಕಾಂ’ ವರದಿ ಮಾಡಿದೆ.

- Advertisement -

ಗಣರಾಜ್ಯೋತ್ಸವದ ಪೂರ್ವಭಾವಿಯಾಗಿ ಇಂದು ದೆಹಲಿಯ ಗಡಿಗಳಲ್ಲಿ ಟ್ರಾಕ್ಟರ್ ರ್ಯಾಲಿ ಆರಂಭಿಸಿದ ರೈತರು, ಸರಕಾರಕ್ಕೆ ಕಾಳಜಿಯಿದ್ದರೆ ಜ.26ರೊಳಗೆ ಈ ಕರಾಳ ಕಾಯ್ದೆಗಳನ್ನು ವಾಪಾಸ್ ಪಡೆಯಲಿ, ಇಲ್ಲದಿದ್ದಲ್ಲಿ ಮುಂದೆ ನಡೆಯುವ ಹೋರಾಟಗಳಿಗೆ ಸರಕಾರವೇ ಹೊಣೆ ಎಂದು ಅವರು ತಿಳಿಸಿರುವುದಾಗಿ ವರದಿಯಾಗಿದೆ.

ಇಂದಿನ ಟ್ರಾಕ್ಟರ್ ರ್ಯಾಲಿಗೆ ಪಂಜಾಬ್ ಮತ್ತು ಹರ್ಯಾಣದ ಮೂಲದ ಸುಮಾರು 85 ಸಾವಿರಕ್ಕೂ ಹೆಚ್ಚು ಟ್ರಾಕ್ಟರ್ ಗಳು ಭಾಗವಹಿಸಿವೆ. ಈಗಾಗಲೇ ಸಿಂಘು, ಟಿಕ್ರಿ, ಗಾಝಿಪುರ್ ಪ್ರತಿಭಟನಾ ಸ್ಥಳಗಳಿಂದ ರ್ಯಾಲಿ ಹೊರಟಿದ್ದು, ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದ ರೈತರು ತಮ್ಮ ಟ್ರಾಕ್ಟರ್ ಗಳೊಂದಿಗೆ ರ್ಯಾಲಿಯಲ್ಲಿ ಜೊತೆಗೂಡಿದ್ದಾರೆ.

- Advertisement -

“ನಾವು ನ.27ಕ್ಕೆ ಇಲ್ಲಿಗೆ ಬಂದೆವು. ಸರಕಾರ ನಮ್ಮನ್ನು ತಡೆಯಲು ಹಳ್ಳ ತೋಡಿತು, ಮುಳ್ಳುತಂತಿ, ಬ್ಯಾರಿಕೇಡ್ ಗಳನ್ನು ಅಡ್ಡ ನಿಲ್ಲಿಸಿತು. ಆದರೂ ಸರ್ಕಾರ ಒಡ್ಡಿದ ಸವಾಲುಗಳನ್ನು ಎದುರಿಸಿ ನಾವು ಇಲ್ಲಿಗೆ ಬಂದಿದ್ದೇವೆ. ಇಂದು ಶಾಂತಿಯುತವಾಗಿ ಟ್ರಾಕ್ಟರ್ ರ್ಯಾಲಿ ಮಾಡುತ್ತೇವೆ. ಆದರೆ, ಸರಕಾರ ಅದಕ್ಕೂ ತಡೆ ಹಾಕಿದರೆ, ಬ್ಯಾರಿಕೇಡ್ ಗಳನ್ನು ಉರುಳಿಸಿ ಮುನ್ನುಗ್ಗುತ್ತೇವೆ’’ ಎಂದು ರೈತ ಮುಖಂಡ ರಿಜಿಂದರ್ ಸಿಂಗ್ ‘ನಾನುಗೌರಿ.ಕಾಂ’ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ಇದೊಂದು ರೈತ ಹೋರಾಟಗಾರರ ಶಕ್ತಿ ಪ್ರದರ್ಶನವಾಗಿದೆ. ಇದಕ್ಕೆ ಯಾವುದೇ ತೊಂದರೆಯಾಗದಂತೆ ಸರಕಾರ ನೋಡಿಕೊಳ್ಳಬೇಕು. ದೆಹಲಿಯ ಎಲ್ಲಾ ಗಡಿಗಳಲ್ಲಿ 400 ಕಿ.ಮೀ. ಆಸುಪಾಸಿನಲ್ಲಿ ರ್ಯಾಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.   

Join Whatsapp