ವಾಷಿಂಗ್ಟನ್ : ಭಾರತದಲ್ಲಿ ಕಳೆದ ಎರಡು ತಿಂಗಳುಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ಈಗ ಅಮೆರಿಕದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ರೈತರ ಹೋರಾಟದ ಕುರಿತಂತೆ ಚರ್ಚಿಸಲು ಅಮೆರಿಕ ಸಂಸದರ ಭಾರತೀಯ ಸಮಿತಿ ಸಭೆ ಕರೆದಿದೆ ಎಂದು ವರದಿಗಳು ತಿಳಿಸಿವೆ.
ಅಮೆರಿಕ ಸಂಸತ್ತಿನ ಇಂಡಿಯಾ ಕಾಕಸ್ ನ ಅಧ್ಯಕ್ಷ ಬ್ರಾಡ್ ಶೆರ್ಮನ್ ಈ ಸಭೆ ಕರೆದಿದ್ದಾರೆ. ರಿಪಬ್ಲಿಕನ್ ಪಕ್ಷದ ಸಹ ಅಧ್ಯಕ್ಷ, ಸಂಸದ ಸ್ಟೀವ್ ಚಬೊಟ್, ಉಪಾಧ್ಯಕ್ಷ, ಸಂಸದ ರೋ ಖನ್ನಾ ಅವರೂ ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಮೆರಿಕದ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರೊಂದಿಗೆ ಮಾತನಾಡಲು ಈ ಸಭೆ ಕರೆಯಲಾಗಿದೆ ಎಂದು ವರದಿಗಳು ತಿಳಿಸಿವೆ.
ಪ್ರಜಾಪ್ರಭುತ್ವದ ಬೇರುಗಳನ್ನು ಕಾಪಾಡಿಕೊಳ್ಳಲಾಗಿದೆಯೇ? ಪ್ರತಿಭಟನಕಾರರಿಗೆ ಶಾಂತಿಯುತವಾಗಿ ಪ್ರತಿಭಟಿಸಲು ಅವಕಾಶ ನೀಡಲಾಗಿದೆಯೇ? ಪ್ರತಿಭಟನಕಾರರಿಗೆ ಇಂಟರ್ನೆಟ್ ಲಭ್ಯವಿದೆಯೇ? ಮತ್ತು ಪ್ರತಿಭಟನಕಾರರು ಪತ್ರಕರ್ತರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆಯೇ? ಎಂಬುದನ್ನು ಖಚಿತಪಡಿಸಬೇಕು. ರೈತರು ಮತ್ತು ಸರಕಾರದ ನಡುವೆ ಒಂದು ನ್ಯಾಯ ಸಮ್ಮತ ಒಪ್ಪಂದ ಏರ್ಪಡಬಹುದು ಎಂಬ ಆಶಾಭಾವನೆ ಭಾರತದ ಎಲ್ಲಾ ಮಿತ್ರದೇಶಗಳೂ ಹೊಂದಿವೆ ಎಂದು ಬ್ರಾಡ್ ಶೆರ್ಮನ್ ಹೇಳಿದ್ದಾರೆ.