ರೈತರ ವಿರುದ್ಧ ‘ನಾಗ’ ಕಂಪನಿ ನಿಂತಿದೆ : ಹರ್ಷಾನಂದ್ ಜೀ ಮಹಾರಾಜ್

Prasthutha|

ನವದೆಹಲಿ : ರೈತರ ವಿರುದ್ಧ ‘ನಾಗ’ ಎಂಬ ಕಂಪನಿ ನಿಂತಿದೆ. ನಾಗ ಎಂದರೆ ‘ನರೇಂದ್ರ, ಅಮಿತ್‌, ಗೌತಮ್‌, ಅದಾನಿ’ ಎಂದು ಯೋಗ ದರ್ಶನ ಪಾರಮಾರ್ಥಿಕ ಟ್ರಸ್ಟ್‌ ಸಂಸ್ಥಾಪಕ ಶ್ರೀ ಹರ್ಷಾನಂದಜಿ ಮಹಾರಾಜ್‌ ವಿಶ್ಲೇಷಿಸಿದ್ದಾರೆ.

- Advertisement -

ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಹರ್ಷಾನಂದ್‌ ಜಿ ಮಹರಾಜ್‌, ‘ಮಾಸ್‌ ಮೀಡಿಯಾ ಫೌಂಡೇಷನ್‌’ ಪ್ರತಿನಿಧಿಯೊಂದಿಗೆ ಮಾತಾಡುತ್ತಾ, ಕಾರ್ಪೋರೇಟ್‌ ಶಕ್ತಿಗಳು ರೈತ ವಿರೋಧಿ ನಿಲುವು ತಳೆದಿರುವ ಬಗ್ಗೆ ಪ್ರತಿಕ್ರಿಯಿಸಿದರು.

“ರೈತ ಭಾರತದ ಆತ್ಮ. ಇಂದು ಆ ರೈತ ಕನಿಷ್ಠ ಬೆಂಬಲ ಬೆಲೆಗಾಗಿ ಹೋರಾಟ ನಡೆಸುತ್ತಿದ್ದಾನೆ. ಜಗತ್ತಿನ ಎಲ್ಲ ವಸ್ತುಗಳನ್ನು ಮಾರುವವನು ನಿರ್ಧಾರ ಮಾಡುತ್ತಾನೆ. ಆದರೆ ರೈತನ ಫಸಲಿನ ಬೆಲೆಯನ್ನು ಖರೀದಿಸುವವನು ನಿರ್ಧರಿಸುತ್ತಾನೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

- Advertisement -

“ಈ ಚಿತ್ರಣವನ್ನು ಬದಲಿಸುವುದು ಈ ಸಮಯದ ಅಗತ್ಯ. ಆದರೆ ರೈತರಿಗೆ ಮುಖಾಮುಖಿಯಾಗಿರುವುದು ಒಂದು ಖಾಸಗಿ ಕಂಪನಿ. ಅದನ್ನು ನಾನು ನಾಗ ಎಂದು ಕರೆಯುತ್ತೇನೆ. ನಾಗ ಎಂದರೆ, ನರೇಂದ್ರ, ಅಮಿತ್‌, ಗೌತಮ್‌, ಅದಾನಿ. ಸರ್ಕಾರ ಎಂಬುದು ಇದ್ದಿದ್ದರೆ, ರೈತರ ಜೊತೆಗೆ ಕೂತು ಮಾತನಾಡುತ್ತಿತ್ತು. ಆದರೆ ಇಂದು ವಿಶಾಲ ಆಕಾಶದ ಕೆಳಗೆ ಅಸಂಖ್ಯಾತ ರೈತರು ಸೇರಿದ್ದಾರೆ. ಈ ಚಳಿಯಲ್ಲಿ ಅಮಾಯಕರು ಸಾವನ್ನಪ್ಪಿದ್ದಾರೆ. ಇದಾವುದೂ ಖಾಸಗಿ ಕಂಪನಿಯವರಿಗೆ ತಟ್ಟುತ್ತಿಲ್ಲ. ಅಂತಹ ಸಂವೇದನೆ ಅವರಿಗೆ ಇರುವುದೂ ಇಲ್ಲ” ಎಂದು ಅವರು ತಿಳಿಸಿದರು.

ನಾವು ಈಸ್ಟ್‌ ಇಂಡಿಯಾ ಕಂಪನಿಯನ್ನು ನೋಡಿದ್ದೇವೆ. ಅವರು ಹೇಗೆ ರಕ್ತ ಹೀರುತ್ತಿದ್ದರು ಎಂಬುದನ್ನು ನೋಡಿದ್ದೇವೆ. ಅದೇ ಪರಿಸ್ಥಿತಿ ಇಂದೂ ಇದೆ. ಈ ಪರಿಸ್ಥಿತಿಯನ್ನು ಬದಲಿಸುವುದಕ್ಕಾಗಿಯೇ ಪ್ರಕೃತಿಯೇ ಈ ಆಂದೋಲನವನ್ನು ನಡೆಸುತ್ತಿದೆ. ಈ ಆಂದೋಲನ ಸಂಪೂರ್ಣ ಮಾನವ ಕುಲಕ್ಕೆ ಪಾಠವಾಗಲಿದೆ. ಸೇವೆಯೊಂದಿಗೆ ಒಂದು ಆಂದೋಲನವನ್ನು ಹೇಗೆ ನಡೆಸಬಹುದು, ಹೇಗೆ ಜಯವನ್ನು ರೂಪಿಸಬಹುದು ಎಂಬುದನ್ನು ಕಲಿಸಿಕೊಡಲಿದೆ ಎಂಬ ವಿಶ್ವಾಸ ನನ್ನದು ಎಂದು ಹರ್ಷಾನಂದ್‌ ಜಿ. ಮಹಾರಾಜ್‌ ಹೇಳಿದರು.

ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ.

Join Whatsapp