ಶಾಮ್ಲಿ : ಉತ್ತರ ಪ್ರದೇಶದ ಬಿಜೆಪಿ ಸರಕಾರ ಅನುಮತಿ ನಿರಾಕರಿಸಿದ್ದರೂ, ಅಲ್ಲಿನ ಶಾಮ್ಲಿ ಜಿಲ್ಲೆಯಲ್ಲಿ ಇಂದು ರೈತ ಹೋರಾಟ ಬೆಂಬಲಿಸಿ ಬೃಹತ್ ಪ್ರಮಾಣದಲ್ಲಿ ರೈತರ ಪಂಚಾಯತ್ ನಲ್ಲಿ ಪ್ರತಿಭಟನಕಾರರು ನೆರೆದಿದ್ದಾರೆ.
ಕೋವಿಡ್ 19 ಕಾರಣ ನೀಡಿ, ರೈತರ ಮಹಾಪಂಚಾಯತ್ ಗೆ ಉತ್ತರ ಪ್ರದೇಶ ಸರಕಾರ ಅವಕಾಶ ನಿರಾಕರಿಸಿತ್ತು. ಆದರೆ, ರೈತರ ಪಂಚಾಯತ್ ಗೆ ಕರೆ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ ಮತ್ತು ರಾಷ್ಟ್ರೀಯ ಲೋಕದಳ ಈ ಚಳವಳಿಯಿಂದ ತಾವು ಹಿಮ್ಮೆಟ್ಟುವುದಿಲ್ಲ ಎಂದು ದೃಢಪಡಿಸಿದ್ದವು.
ಹೀಗಾಗಿ ಇಂದು ಅಸಂಖ್ಯಾತ ರೈತರು ಶಾಮ್ಲಿಯಲ್ಲಿ ನೆರೆದಿದ್ದಾರೆ. “ನಾಳೆ ಶಾಮ್ಲಿಗೆ ತೆರಳಲು 144 ಕಾರಣಗಳಿವೆ” ಎಂದು ಆರ್ ಎಲ್ ಡಿ ಮುಖಂಡ ಜಯಂತ್ ಚೌಧರಿ ನಿನ್ನೆ ಟ್ವೀಟ್ ಮಾಡಿದ್ದರು. ಸರಕಾರ ಸೆ.144 ಜಾರಿಗೊಳಿಸಿದ್ದ ಅನ್ನು ಉಲ್ಲೇಖಿಸಿ ಅವರು ಈ ರೀತಿ ವ್ಯಂಗ್ಯವಾಡಿದ್ದರು.